ಬೆಂಗಳೂರು : ನಗರದಲ್ಲಿಂದು ಬೆಳ್ಳಂಬೆಳಗ್ಗೆಯೇ ಬಿಬಿಎಂಪಿ ಮಾಜಿ ಪಾಲಿಕೆ ಸದಸ್ಯೆಯ ಹತ್ಯೆ ಆಗಿದೆ. ಛಲವಾದಿಪಾಳ್ಯದ ಫ್ಲವರ್ ಗಾರ್ಡನ್ ನಲ್ಲಿ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಅವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಛಲವಾದಿಪಾಳ್ಯದ ಫ್ಲವರ್ ಗಾರ್ಡನ್ ನ ಮನೆಯಲ್ಲಿದ್ದ ರೇಖಾ ಕದಿರೇಶ್ ಅವರನ್ನು ಹೊರಗೆ ಕರೆದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ತೀವ್ರ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಮಾಜಿ ಕಾರ್ಪೊರೇಟರ್ ಕತ್ತು ಮತ್ತು ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ರಕ್ತಸ್ರಾವವಾಗಿ ಕೆಳಗೆ ಬಿದ್ದ ಅವರನ್ನು ಸ್ಥಳದಲ್ಲಿದ್ದವರು ಕೂಡಲೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದರೂ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ. ಸ್ಥಳಕ್ಕೆ ಚಿಕ್ಕಪೇಟೆ ಎಸಿಪಿ ಮತ್ತು ಕಾಟನ್ ಪೇಟೆ ಪೊಲೀಸರು ಭೇಟಿ ನೀಡಿದ್ದಾರೆ.
ಹಳೆ ವೈಷಮ್ಯದಿಂದ ರೇಖಾ ಅವರ ಹತ್ಯೆ ನಡೆದಿದೆ ಎಂದು ಸಂಶಯ ವ್ಯಕ್ತಪಡಿಸಲಾಗಿದ್ದು, 2018ರ ಫೆಬ್ರವರಿ 7ರಂದು ಛಲವಾದಿ ಪಾಳ್ಯದ ಬಿಜೆಪಿ ಪಾಲಿಕೆ ಸದಸ್ಯರಾಗಿದ್ದ ರೇಖಾ ಅವರ ಪತಿ ಕದಿರೇಶ್ ಅವರನ್ನು ಹಾಡಹಗಲೇ ಕಾಟನ್ ಪೇಟೆಯ ಅಂಜಿನಪ್ಪ ಗಾರ್ಡನ್ ನಲ್ಲಿ ಕೊಲೆ ಮಾಡಲಾಗಿತ್ತು.










