ಬಿಹಾರ ಸಚಿವ ಸಂಪುಟ ವಿಸ್ತರಣೆ – 31 ನೂತನ ಸಚಿವರು ಪ್ರಮಾಣವಚನ ಸ್ವೀಕಾರ…

105
firstsuddi

ಪಾಟ್ನಾ : ಬಿಜೆಪಿ ಜೊತೆಗಿನ ಮೈತ್ರಿ ಮುರಿದುಕೊಂಡು ಜೆಡಿಯು, ಕಾಂಗ್ರೆಸ್ ಹಾಗೂ ಇತರೆ ಎಡಪಕ್ಷಗಳೊಂದಿಗೆ ಸೇರಿಕೊಂಡು ಮಹಾಘಟಬಂಧನ್ ಸರ್ಕಾರ ರಚಿಸಿರುವ ನಿತೀಶ್ ಕುಮಾರ್ ಇಂದು ಸಚಿವ ಸಂಪುಟ ವಿಸ್ತರಣೆ ಮಾಡಿದ್ದಾರೆ. ಒಟ್ಟು 31 ಶಾಸಕರು ಬಿಹಾರದ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಸಂಪುಟ ವಿಸ್ತರಣೆಯ ಭಾಗವಾಗಿ ಇಂದು ಬಿಹಾರದ 31 ಶಾಸಕರು ಪ್ರಮಾಣ ವಚನ ಸ್ವೀಕರಿಸಿದ್ದು, ನಿರೀಕ್ಷೆಯಂತೆ ಆರ್ ಜೆಡಿ ಸಚಿವ ಸ್ಥಾನಗಳಲ್ಲಿ ಸಿಂಹಪಾಲು ಪಡೆಯುವಲ್ಲಿ ಯಶಸ್ವಿಯಾಗಿದೆ. ಆರ್‌ಜೆಡಿಯ 16 ಶಾಸಕರು, ಜೆಡಿಯುದಿಂದ 11 ಶಾಸಕರು ಸಚಿವರಾಗಿ ಪ್ರಮಾಣ ವಚನ ಪಡೆದರು. ಉಳಿದಂತೆ ಕಾಂಗ್ರೆಸ್ ನ ಇಬ್ಬರು ಹಾಗೂ ಹಿಂದೂಸ್ತಾನ ಅವಾನಿ ಮೋರ್ಚಾದ ಓರ್ವ ಶಾಸಕನಿಗೆ ಮಂತ್ರಿಭಾಗ್ಯ ಸಿಕ್ಕಿದೆ. ಲಾಲೂ ಪ್ರಸಾದ್ ಯಾದವ್ ಅವರ ಇನ್ನೋರ್ವ ಪುತ್ರ ತೇಜ್ ಪ್ರತಾಪ್ ಯಾದವ್ ಕೂಡ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಪಾಟ್ನಾದ ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಫಾಗು ಚೌಹಾನ್ ಪ್ರಮಾಣ ವಚನ ಬೋಧಿಸಿದರು.

ಆರ್‌ಜೆಡಿಯಿಂದ ತೇಜ್ ಪ್ರತಾಪ್ ಯಾದವ್, ಸುರೇಂದ್ರ ಯಾದವ್, ಲಲಿತ್ ಯಾದವ್, ಕುಮಾರ್ ಸರ್ವಜೀತ್, ಸುರೇಂದ್ರ ರಾಮ್, ಶಹನವಾಜ್ ಆಲಂ, ಸಮೀರ್ ಮಹಾಸೇತ್, ಭಾರತ್ ಮಂಡಲ್, ಅನಿತಾ ದೇವಿ ಮತ್ತು ಸುಧಾಕರ್ ಸಿಂಗ್ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಕಾಂಗ್ರೆಸ್‌ನಿಂದ ಅಫಾಕ್ ಆಲಂ ಮತ್ತು ಮುರಾರಿ ಲಾಲ್ ಗೌತಮ್ ಮತ್ತು ಎಚ್‌ಎಎಂನಿಂದ ಸಂತೋಷ್ ಸುಮನ್ ಕೂಡ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಜೆಡಿಯುನಿಂದ ವಿಜಯ್ ಕುಮಾರ್ ಚೌಧರಿ, ಅಶೋಕ್ ಚೌಧರಿ, ಸಂಜಯ್ ಝಾ, ಮದನ್ ಸಾಹ್ನಿ, ಜಯಂತ್ ರಾಜ್, ಶೀಲಾ ಮಂಡಲ್, ಬಿಜೇಂದ್ರ ಯಾದವ್, ಶ್ರವಣ್ ಕುಮಾರ್, ಸುನಿಲ್ ಕುಮಾರ್ ಮತ್ತು ಜಮಾ ಖಾನ್ ಮತ್ತಿತರರು ಪ್ರಮಾಣವಚನ ಸ್ವೀಕರಿಸಿದ್ದಾರೆ.

ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಹಾಗೂ ಉಪ ಮುಖ್ಯಮಂತ್ರಿಯಾಗಿ ತೇಜಸ್ವಿ ಯಾದವ್ ಆಗಸ್ಟ್ 10ರಂದು ಪ್ರಮಾಣ ವಚನ ಸ್ವೀಕರಿಸಿದ್ದರು.