ಬಿಹಾರ ಸುಧಾರಣೆಗಾಗಿ 3,000 ಕಿ.ಮೀ. ಪಾದಯಾತ್ರೆ ಕೈಗೊಳ್ಳಲಿದ್ದಾರೆ ಚುನಾವಣಾ ಚಾಣಕ್ಯ.

51
firstsuddi

ನವದೆಹಲಿ : ಸದ್ಯಕ್ಕೆ ಹೊಸ ಪಕ್ಷ ಸ್ಥಾಪನೆ ಮಾಡಲ್ಲ ಎಂದು ಸ್ಪಷ್ಟಪಡಿಸಿರುವ ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಬಿಹಾರದ ಸುಧಾರಣೆಗಾಗಿ 3 ಸಾವಿರ ಕಿಲೋ ಮೀಟರ್ ಪಾದಯಾತ್ರೆ ಕೈಗೊಳ್ಳುವುದಾಗಿ ಘೋಷಣೆ ಮಾಡಿದ್ದಾರೆ.

ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಕ್ಟೋಬರ್ 2ರಿಂದ 3,000 ಕಿ.ಮೀ.ವರೆಗೆ ಪಾದಯಾತ್ರೆ ಆರಂಭಿಸಲಿದ್ದೇನೆ. ನಾನು ಯಾವುದೇ ರಾಜಕೀಯ ಪಕ್ಷವನ್ನು ಘೋಷಿಸಲು ಹೋಗುವುದಿಲ್ಲ. ಕಳೆದ ಐದು ತಿಂಗಳಲ್ಲಿ ನಾನು 17,000ಕ್ಕೂ ಹೆಚ್ಚು ಜನರೊಂದಿಗೆ ಸಂಪರ್ಕವನ್ನು ಸ್ಥಾಪಿಸಿದ್ದೇನೆ. ಕಳೆದ ಮೂರು ದಿನಗಳಲ್ಲಿ ನಾನು 150ಕ್ಕೂ ಹೆಚ್ಚು ಜನರನ್ನು ಭೇಟಿ ಮಾಡಿದ್ದೇನೆ. ಇನ್ನು ಮೂರ್ನಾಲ್ಕು ತಿಂಗಳಲ್ಲಿ 17ರಿಂದ 18 ಸಾವಿರ ಜನರನ್ನು ಭೇಟಿ ಮಾಡಿ ಜನ್ ಸೂರಾಜ್ ಕುರಿತು ಚರ್ಚೆ ನಡೆಸುತ್ತೇನೆ ಅಂತ ಅವರು ಹೇಳಿದರು.

ಕಳೆದ ಮೂರು ದಶಕಗಳಿಂದ ಬಿಹಾರವನ್ನು ಲಾಲು ಮತ್ತು ನಿತೀಶ್ ಆಳ್ವಿಕೆ ನಡೆಸುತ್ತಿದ್ದಾರೆ ಮತ್ತು ಇಬ್ಬರೂ ನಾಯಕರೂ ‘ಸಾಮಾಜಿಕ ನ್ಯಾಯ’ ಅಥವಾ ‘ಅಭಿವೃದ್ಧಿ’ಯ ಮಾತುಗಳನ್ನು ಆಡುತ್ತಿದ್ದಾರೆ. ಆದರೆ ಬಿಹಾರವು ಅತ್ಯಂತ ಹಿಂದುಳಿದ ರಾಜ್ಯವಾಗಿದೆ ಎಂಬುದು ಸತ್ಯ. ಆದುದರಿಂದ ಬಿಹಾರದ ಬೆಳವಣಿಗೆಗೆ ‘ಹೊಸ ಚಿಂತನೆ ಮತ್ತು ಹೊಸ ಪ್ರಯತ್ನ’ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ಕಳೆದ 10 ವರ್ಷಗಳಲ್ಲಿ ಜನರು ನನ್ನನ್ನು ಅರ್ಥಮಾಡಿಕೊಂಡಿದ್ದಾರೆ. ಭವಿಷ್ಯದಲ್ಲಿ ತಾವು ಜನರ ಗೌರವವನ್ನು ಗೆಲ್ಲುತ್ತೇನೆ. ನನಗೆ ಅವಕಾಶ ನೀಡಿ ಎಂದು ಹೇಳಿದ ಪ್ರಶಾಂತ್ ಕಿಶೋರ್ ಅವರು, ಸಿಎಂ ನಿತೀಶ್ ಕುಮಾರ್ ಅವರೊಂದಿಗಿನ ಸಂಬಂಧದ ಕುರಿತು ಪ್ರತಿಕ್ರಿಯಿಸಿ, 2015ರಲ್ಲಿ ಅವರೊಂದಿಗೆ ಕೆಲಸ ಮಾಡಿದ್ದೇನೆ ಮತ್ತು ಅವರ ಬಗ್ಗೆ ಯಾವುದೇ ಕಹಿ ಭಾವನೆ ಹೊಂದಿಲ್ಲ ಎಂದಿದ್ದಾರೆ.