ಯಾದಗಿರಿ : ಬುದ್ದಿ ಮಾತು ಹೇಳಿದ್ದಕ್ಕೆ ಕೋಪಗೊಂಡ ಅಣ್ಣ, ಸಹೋದರನನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಗುರುಮಠಕಲ್ ತಾಲೂಕಿನ ಎಂಪಾಡ ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದೆ.
ತಮ್ಮ ದೇವಿಂದ್ರ ಚವ್ಹಾಣ್(28)ನನ್ನು ಅಣ್ಣ ಜಯರಾಮ್ ಕೊಲೆ ಮಾಡಿದ್ದಾನೆ. ಜಯರಾಮ್ ಹಾಗೂ ದೇವಿಂದ್ರ ಯುಗಾದಿ ಹಬ್ಬದ ಹಿನ್ನೆಲೆ ಊರಿಗೆ ಬಂದಿದ್ದರು. ಈ ವೇಳೆ ನಿನ್ನೆ ರಾತ್ರಿ ಇಬ್ಬರ ನಡುವೆ ಜಗಳ ಪ್ರಾರಂಭವಾಗಿದೆ. ಈ ವೇಳೆ ದೇವಿಂದ್ರ ಜಮ್ಲಾನಾಯಕ ಮಕ್ಕಳ ಸಹವಾಸ ಮಾಡಬೇಡ ಎಂದು ಜಯರಾಮ್ ಗೆ ಬುದ್ದಿ ಹೇಳಿದ್ದಾನೆ.
ಬುದ್ದಿ ಮಾತು ಹೇಳಿದ್ದಕ್ಕೆ ಕೋಪಗೊಂಡ ಜಯರಾಮ್ ಕುಟುಂಬಸ್ಥರ ಮುಂದೆಯೇ ದೇವಿಂದ್ರನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಗುರುಮಠಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಗುರಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










