ಬೆಂಗಳೂರಿನಲ್ಲಿ ಏಕಾಏಕಿ ಕುಸಿದ ರಸ್ತೆ – ಇಬ್ಬರು ಬೈಕ್ ಸವಾರರಿಗೆ ಗಾಯ…

51
firstsuddi

ಬೆಂಗಳೂರು : ಮೆಟ್ರೋ ಕಾಮಗಾರಿ ವೇಳೆ ಪಿಲ್ಲರ್ ಬಿದ್ದು ಇಬ್ಬರು ಸಾವನ್ನಪ್ಪಿರುವ ಘಟನೆ ಮಾಸುವ ಮುನ್ನವೇ ಮತ್ತೊಂದು ದುರ್ಘಟನೆ ಸಂಭವಿಸಿರುವುದು ಬೆಳಕಿಗೆ ಬಂದಿದೆ. ಏಕಾಏಕಿ ರಸ್ತೆ ಮಧ್ಯೆದಲ್ಲೇ ಗುಂಡಿ ಬಿದ್ದಿದ್ದು, ಇಬ್ಬರು ಬೈಕ್ ಸವಾರರು ಗುಂಡಿಗೆ ಬಿದ್ದು ಗಾಯಗೊಂಡಿದ್ದಾರೆ.

ಮೆಟ್ರೋ ಕಾಮಗಾರಿ ಹಿನ್ನೆಲೆಯಲ್ಲಿ ಬ್ರಿಗೇಡ್ ಟವರ್ ಬಳಿಯ ಜಾನ್ಸನ್ ಮಾರ್ಕೆಟ್ ರಸ್ತೆಯ ಮಧ್ಯೆ ಭಾಗದಲ್ಲಿ ಏಕಾಏಕಿ ಗುಂಡಿ ಬಿದ್ದು ಅವಘಡ ಉಂಟಾಗಿದೆ. ಗಾಯಗೊಂಡ ಇಬ್ಬರು ಬೈಕ್ ಸವಾರರನ್ನು ಸ್ಥಳೀಯರು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಸದ್ಯ ಸ್ಥಳಕ್ಕೆ ದೌಡಾಯಿಸಿರುವ ಪೊಲೀಸರು ರಸ್ತೆ ಸಂಪೂರ್ಣ ಬಂದ್ ಮಾಡಿದ್ದಾರೆ. ಸಾರ್ವಜನಿಕರ ಸಂಚಾರಕ್ಕೆ ಪರ್ಯಾಯ ಮಾರ್ಗ ಕಲ್ಪಿಸಿದ್ದಾರೆ.

ಸದ್ಯ ರಸ್ತೆ ದುರಸ್ತಿಗೆ ಕ್ರಮ ಕೈಗೊಂಡಿರುವ ಬಿಎಂಆರ್‌ಸಿಎಲ್ (BMRCL), ರಿಚ್ಮಂಡ್ ಸರ್ಕಲ್ ಮೂಲಕ ಪರ್ಯಾಯ ಮಾರ್ಗ ಕಲ್ಪಿಸಿದೆ. ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಬಿಎಂಆರ್‌ಸಿಎಲ್ ಕ್ಲಿಯರೆನ್ಸ್ ಕೊಡುವವರೆಗೆ ನಾವು ಸಂಚಾರ ಮುಕ್ತ ಮಾಡಲ್ಲ ಎಂದು ಹೇಳಿದೆ.

ಆಡುಗೋಡಿಯಿಂದ ಶಿವಾಜಿನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ಸುರಂಗ ಮಾರ್ಗದಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ರಸ್ತೆ ಮಧ್ಯಭಾಗದಲ್ಲಿ ಮಣ್ಣು ಸಡಿಲವಾಗಿದೆ ಎಂದು ಹೇಳಲಾಗುತ್ತಿದೆ.

ಎರಡು ದಿನಗಳ ಹಿಂದೆಯಷ್ಟೇ ನಾಗಾವರದ ಮೆಟ್ರೋ ಪಿಲ್ಲರ್ ಕುಸಿದು ತಾಯಿ ಮಗು ಸಾವನ್ನಪ್ಪಿದ್ದರು. ಪ್ರಕರಣದಲ್ಲಿ ಮತ್ತೊಂದು ಮಗು ಹಾಗೂ ತಂದೆ ಲೋಹಿತ್ ಪಾರಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಎಂಜಿನಿಯರ್ ಗಳನ್ನು ಅಮಾನತುಗೊಳಿಸಿ ಬಿಎಂಆರ್‌ಸಿಎಲ್ ಆದೇಶ ಹೊರಡಿಸಿದೆ.