ಚಂಡೀಗಢ : ಎಲ್ ಪಿಜಿ ಸಿಲಿಂಡರ್ ಸ್ಫೋಟಗೊಂಡು ಒಂದೇ ಕುಟುಂಬದ ಆರು ಮಂದಿ ಸಾವನ್ನಪ್ಪಿರುವ ಘಟನೆ ಪಾಣಿಪತ್ ನ ತಹಸಿಲ್ ಕ್ಯಾಂಪ್ ಪ್ರದೇಶದಲ್ಲಿ ಇಂದು ನಡೆದಿದೆ.
ಸ್ಫೋಟದಿಂದ ಭಾರಿ ಬೆಂಕಿ ಆವರಿಸಿದ್ದು ಪತಿ-ಪತ್ನಿ ಸೇರಿದಂತೆ ನಾಲ್ಕು ಮಕ್ಕಳು ಸಜೀವ ದಹನವಾಗಿದ್ದಾರೆ. ಮೃತರನ್ನು ಅಬ್ದುಲ್ ಕರೀಂ (48), ಅವರ ಪತ್ನಿ ಅಫ್ರೋಜ್ (45), ಅವರ ಪುತ್ರಿಯರಾದ ಇಶ್ರತ್ (18), ರೇಷ್ಮಾ (16) ಮತ್ತು ಅಫ್ಸಾನಾ (8) ಮತ್ತು ಮಗ ಅಬ್ದುಶ್ ಶಕುರ್ (12) ಎಂದು ಗುರುತಿಸಲಾಗಿದೆ.
ಪಾಣಿಪತ್ ಜನವಸತಿ ಪ್ರದೇಶದಲ್ಲಿ ವಾಸವಿದ್ದ ಕುಟುಂಬ ಪಶ್ಚಿಮ ಬಂಗಾಳದಿಂದ ವಲಸೆ ಬಂದಿತ್ತು ಎನ್ನಲಾಗಿದೆ. ಪ್ರಕರಣ ಕುರಿತು ಪಾಣಿಪತ್ ಪೊಲೀಸ್ ಅಧೀಕ್ಷಕ ಶಶಾಂಕ್ ಕುಮಾರ್ ಸಾವನ್ ಮಾತನಾಡಿ, ಬೆಳಗ್ಗೆ 6:30 ರ ಸಮಯದಲ್ಲಿ ಅಡುಗೆ ಮಾಡುತ್ತಿದ್ದಾಗ ಈ ಅವಘಡ ಸಂಭವಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ಮನೆಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸುವಷ್ಟರಲ್ಲಿ, ಸಿಲಿಂಡರ್ ಸ್ಫೋಟಿಸಿದ್ದ ಕೊಠಡಿ ಸುಟ್ಟುಹೋಗಿತ್ತು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.










