ಬೆಂಗಳೂರು : ನಗರದ ದೇವರಚಿಕ್ಕನಹಳ್ಳಿ ಬಳಿಯ ಆಶ್ರಿತ್ ಅಪಾರ್ಟ್ ಮೆಂಟ್ ನಲ್ಲಿ ನಿನ್ನೆ ಸಂಜೆ ಭೀಕರ ಬೆಂಕಿ ಅವಘಡ ಅಗ್ನಿ ಅವಘಡ ಸಂಭವಿಸಿದೆ.
ಸಂಜೆ 4.35ರಿಂದ 4.40ರ ಸುಮಾರಿಗೆ ಸಿಲಿಂಡರ್ ಸ್ಫೋಟಗೊಂಡಿದೆ. ಪರಿಣಾಮ, ಫ್ಲ್ಯಾಟ್ ಹೊತ್ತಿ ಉರಿದಿದೆ. ಬೆಂಕಿಯ ಜ್ವಾಲೆಗೆ ಮನೆಯಲ್ಲಿದ್ದ ಮಗಳು ಭಾಗ್ಯ ರೇಖಾ (59) ಹಾಗೂ ಅವರ ತಾಯಿ ಲಕ್ಷ್ಮೀದೇವಿ (82) ಸಜೀವ ದಹನ ಆಗಿದ್ದಾರೆ.
ಅಮೆರಿಕದ ಬ್ಯಾಂಕೊಂದರಲ್ಲಿ ಕೆಲಸ ಮಾಡುತ್ತಿದ್ದ ಭಾಗ್ಯರೇಖಾ ಹಾಗೂ ತಾಯಿ ಲಕ್ಷ್ಮೀದೇವಿ ಸೊಮವಾರವಷ್ಟೇ ಅಮೆರಿಕದಿಂದ ಬಂದಿದ್ದರಂತೆ. ಅಗ್ನಿ ಅವಘಡದಲ್ಲಿ ಭೀಮಸೇನ್ ಎಂಬುವವರು ಗಾಯಗೊಂಡಿದ್ದಾರೆ. ಗಾಯಾಳು ಭೀಮಸೇನ್ ಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ವಿಷಯ ತಿಳಿದು ಘಟನಾ ಸ್ಥಳಕ್ಕೆ ಮೂರು ವಾಹನಗಳಲ್ಲಿ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬಂದು ಬೆಂಕಿ ನಂದಿಸಿದರು. ಅಪಾರ್ಟ್‍ಮೆಂಟ್‍ನಲ್ಲಿ ಇನ್ನೂ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಫ್ಲ್ಯಾಟ್ ನಲ್ಲಿ ಸಿಲುಕಿರುವವರನ್ನು ರಕ್ಷಿಸಲು ಹರಸಾಹಸವೇ ನಡೆಯಿತು.
ಅಗ್ನಿಯ ಜ್ವಾಲೆ ಇತರೆ ಮೂರು ಫ್ಲ್ಯಾಟ್ ಗಳಿಗೂ ವಿಸ್ತರಿಸಿದೆ. ಇದರಿಂದ ಆತಂಕಕೊಂಡ ನಿವಾಸಿಗಳು ಕೂಡಲೇ ಹೊರಬಂದಿದ್ದರಿಂದ ಸಂಭವಿಸುತ್ತಿದ್ದ ದೊಡ್ಡ ಅಪಾಯದಿಂದ ಪಾರಾಗಿದ್ದಾರೆ. ಈ ದುರಂತದ ಹಿನ್ನೆಲೆಯಲ್ಲಿ ಸ್ಥಳಕ್ಕೆ ದಕ್ಷಿಣ ವಲಯದ ಜಂಟಿ ಆಯುಕ್ತ ರಾಮಕೃಷ್ಣ ಹಾಗೂ ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಹದೇವನ್ ಜೋಷಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಳೆದ ಮೂರು ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ನೆಲಮಹಡಿ ಸೇರಿದಂತೆ ಐದು ಮಹಡಿ ಹೊಂದಿರುವ ಆಶ್ರಿತ್ ಅಪಾರ್ಟ್ಮೆಂಟ್ ಇದಾಗಿದ್ದು, ಇದರಲ್ಲಿ ಸುಮಾರು 70ಕ್ಕೂ ಹೆಚ್ಚು ಫ್ಲ್ಯಾಟ್ ಗಳಿವೆ.










