ಬೆಂಗಳೂರು: ದೆಹಲಿ ಮೂಲದ ಯುವತಿಯ ಮೃತದೇಹ ಪತ್ತೆ, ಆತ್ಮಹತ್ಯೆ ಶಂಕೆ.

35

ಬೆಂಗಳೂರು: ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಯುವತಿಯ ಮೃತದೇಹ ಪತ್ತೆಯಾದ ಘಟನೆ ಬಾಗಲಗುಂಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನವೆಂಬರ್ 27 ರಂದು ಘಟನೆ ನಡೆದಿದ್ದು, ದೆಹಲಿ ಮೂಲದ ಸೋನಿಯಾ 24 ಮೃತ ಯುವತಿ. ಬಾಗಲಗುಂಟೆ ವ್ಯಾಪ್ತಿಯ 8ನೇ ಮೈಲಿಯಲ್ಲಿರುವ ಸ್ಪಾ ಒಂದರಲ್ಲಿ ಒಂದೂವರೆ ತಿಂಗಳ ಹಿಂದಷ್ಟೆ ಸೋನಿಯಾ ಕೆಲಸಕ್ಕೆ ಸೇರಿಕೊಂಡಿದ್ದಳು. ಕೆಲಸಕ್ಕೆ ಬರಲಿಲ್ಲವೆಂದು ಸ್ಪಾ ಮಾಲೀಕ ಕರೆ ಮಾಡಿದಾಗ ಸೋನಿಯಾ ಸ್ವೀಕರಿಸಿರಲಿಲ್ಲ. ಅನುಮಾನಗೊಂಡ ಸ್ಪಾ ಮಾಲೀಕ ಸೋನಿಯಾಳ ಮನೆ ಬಳಿ ಬಂದು ನೋಡಿದಾಗ ಆಕೆ ಬಾಗಿಲು ತೆರೆದಿರಲಿಲ್ಲ. ತಕ್ಷಣ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ್ದ. ಬಾಗಲಗುಂಟೆ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ನೋಡಿದಾಗ, ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಸೋನಿಯಾಳ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೋನಿಯಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಆದರೆ ನಿಖರ ಕಾರಣ ತಿಳಿದು ಬಂದಿಲ್ಲ. ಸೋಮವಾರ ರಾತ್ರಿ ಕೊನೆಯದಾಗಿ ತನ್ನ ತಾಯಿಯೊಂದಿಗೆ ಸೋನಿಯಾ ಮಾತನಾಡಿರುವುದು ತಿಳಿದು ಬಂದಿದೆ. ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.