ಬೆಳಗಾವಿ : ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ವೃದ್ದ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ರಾಮದುರ್ಗ ತಾಲೂಕಿನ ಬೆನ್ನೂರ ಗ್ರಾಮದಲ್ಲಿ ನಡೆದಿದೆ.
ಬಸಪ್ಪ ಖಾನಾಪುರ(85)ಮೃತಪಟ್ಟ ವೃದ್ದ. ಜಿಲ್ಲೆಯ ರಾಮದುರ್ಗ ಸುರೇಬಾನ ಪಂಚಾಯತಿ ವ್ಯಾಪ್ತಿಯ ಬೆನ್ನೂರ ಗ್ರಾಮದಲ್ಲಿ ಕಲುಷಿತ ನೀರನ್ನು ಸೇವಿಸಿ ಸುಮಾರು 40ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದರು. ಅವರನ್ನು ರಾಮದುರ್ಗ ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ಇಂದು ಚಿಕಿತ್ಸೆ ಫಲಿಸದೇ ವೃದ್ದ ಬಸಪ್ಪ ಮೃತಪಟ್ಟಿದ್ದಾರೆ.
ಇತ್ತ ಸ್ಥಳೀಯ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು, ಮೃತನ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.










