ಭಾರತೀಯ ಸೇನೆಯ ಅವಹೇಳನ ಆರೋಪ: ರಾಹುಲ್ ಗಾಂಧಿಗೆ ಸಮನ್ಸ್ ನೀಡಿದ ಲಕ್ನೋ ಕೋರ್ಟ್.

36

ನವದೆಹಲಿ: 2022ರಲ್ಲಿ ನಡೆದಿದ್ದ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಭಾರತೀಯ ಸೇನೆಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಲಕ್ನೋ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಹೆಚ್ಚುವರಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ಅಲೋಕ್ ವರ್ಮಾ ಅವರು ಪ್ರಕರಣದ ಮುಂದಿನ ವಿಚಾರಣೆಗೆ ಮಾರ್ಚ್ 24 ರಂದು ದಿನಾಂಕವನ್ನು ನಿಗದಿಪಡಿಸಿದ್ದಾರೆ. ಅಂದು ರಾಹುಲ್ ಗಾಂಧಿ ಅವರು ಕೋರ್ಟ್ ಎದುರು ಹಾಜರಾಗುವಂತೆ ಈ ಸಮನ್ಸ್ ನಲ್ಲಿ ಆದೇಶ ನೀಡಲಾಗಿದೆ. ಸೇನಾ ಕರ್ನಲ್ ಹುದ್ದೆಗೆ ಸಮನಾದ ಹುದ್ದೆ ಹೊಂದಿದ್ದ ಬಾರ್ಡರ್ ರೋಡ್ ಆರ್ಗನೈಸೇಷನ್ ಮಾಜಿ ನಿರ್ದೇಶಕ ಉದಯ್ ಶಂಕರ್ ಶ್ರೀವಾಸ್ತವ ಎಂಬುವರ ಪರವಾಗಿ ವಕೀಲ ವಿವೇಕ್ ತಿವಾರಿ ಅವರು ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಿಸಿದ್ದರು. ಭಾರತ ಮತ್ತು ಚೀನಾ ಸೇನೆಗಳ ನಡುವಿನ ಘರ್ಷಣೆಯ ಕುರಿತು ಡಿಸೆಂಬರ್ 16, 2022 ರಂದು ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ನೀಡಿದ ಹೇಳಿಕೆಗಳು ಭಾರತೀಯ ಸೇನೆಯನ್ನು ಅವಹೇಳನ ಮಾಡುವಂತಿದ್ದು, ಮಾನಹಾನಿಕರವಾಗಿವೆ ಎಂದು ವಕೀಲರು ಆರೋಪಿಸಿದ್ದಾರೆ.