ಮೂಡಿಗೆರೆ : ಭಾರತೀಯ ಸೇನೆಯ ಯೋಧರ ಹೆಸರಿನಲ್ಲಿ ಪಟ್ಟಣದ ಪ್ರಮುಖ ಹೋಟೆಲ್ಗಳಿಗೆ ಕರೆ ಮಾಡಿ ಊಟ ಆರ್ಡರ್ ಮಾಡಿ, ಬಿಲ್ ಪಾವತಿಸುವ ಪ್ರಹಸನ ಮಾಡುತ್ತ ಬ್ಯಾಂಕ್ ಖಾತೆಗೆ ಕನ್ನ ಹಾಕುವ ಜಾಲವೊಂದು ಮೂಡಿಗೆರೆಯ ಮೇಲೆ ಕಣ್ಣಿಟ್ಟಿದೆ.
ಬ್ಯಾಂಕ್ ಎ.ಟಿ.ಎಂ ಕಾರ್ಡ್ ಹಾಗೂ ಪಿನ್ ನಂಬರ್ ಕೇಳಿ ಕ್ಷಣ ಮಾತ್ರದಲ್ಲಿ ಹಣ ಲಪಟಾಯಿಸುವ ಸುದ್ದಿಯನ್ನು ಎಲ್ಲೆಡೆ ನಾವು ಕೇಳಿರುತ್ತೇವೆ. ಆದರೆ ಇದೀಗ ಅಂತರ್ಜಾಲ ಕಳ್ಳರ ತಂಡವೊಂದು ಇದೀಗ ಸಾಮಾನ್ಯ ಜನರನ್ನು ಬಿಟ್ಟು ಊರುಗಳಲ್ಲಿ ಹೆಸರು ಮಾಡಿರುವ ಹೋಟೆಲ್ ಉದ್ಯಮ ನಡೆಸುತ್ತಿರುವವರ ಮೇಲೆ ಕಣ್ಣಿಟ್ಟಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಮಂಗಳವಾರದಂದು ಮೂಡಿಗೆರೆ ಪಟ್ಟಣದ ಫುಡ್ ಲ್ಯಾಂಡ್ ಹೋಟೆಲ್ ಒಂದಕ್ಕೆ ಕರೆ ಮಾಡಿ ನಾವು ಭಾರತೀಯ ಸೇನೆಯ ಯೋಧರುಗಳು, ಮೂಡಿಗೆರೆ ಬಳಿಯ ಪ್ರವಾಸಿ ತಾಣಗಳಿಗೆ ಪ್ರವಾಸ ಬಂದಿದ್ದೇವೆ. ಇಂದು ಮಧ್ಯಾಹ್ನ ನಮಗೆ 10 ಊಟಗಳು ಪಾರ್ಸೆಲ್ ಬೇಕು ಎಂದು ಆರ್ಡರ್ ಮಾಡುತ್ತಾರೆ. ಆರ್ಡರ್ ಮಾಡಿದ ಮೆನುವಿನ ಪ್ರಕಾರ ಹೊಟೇಲ್ನವರು ಪ್ಯಾಕ್ ಮಾಡಿ ಕರೆ ಬಂದ ಫೋನ್ಗೆ ಪುನಃ ಕರೆ ಮಾಡಿ ಬರುವಂತೆ ಹೇಳಿದಾಗ ನಮ್ಮ ಕಡೆಯ ವ್ಯಕ್ತಿ ಪಾರ್ಸೆಲ್ ತೆಗೆದುಕೊಂಡು ಹೋಗುತ್ತಾರೆ. ಮೊದಲು ಹಣ ಪಾವತಿಸುತ್ತೇವೆ, ನೆಟ್ ಬ್ಯಾಂಕಿಂಗ್ ಮೂಲಕ ಹಣ ಪಾವತಿಸಲು ನಿಮ್ಮ ಕಾರ್ಡ್ ನಂಬರ್ ಹಾಗೂ ಕಾರ್ಡ್ ಹಿಂದಿನ ಮೂರು ಅಂಕಿಗಳನ್ನು ಅಥವಾ ಬ್ಯಾಂಕ್ ಅಕೌಂಟ್ ನಂಬರ್ ನೀಡುವಂತೆ ಕೋರಿದ್ದಾರೆ.

ಅನುಮಾನಗೊಂಡ ಹೋಟೆಲ್ ಮಾಲೀಕ ಅನೀಸ್ ಅವರು ತಮ್ಮ ಹಣವಿಲ್ಲದ ಖಾತೆಯ ಮಾಹಿತಿ ನೀಡಿದ್ದಾರೆ. ಕೂಡಲೇ ಇದಕ್ಕೆ ಪ್ರತಿಕ್ರಿಯಿಸಿದ ಕಳ್ಳರ ತಂಡ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಕೇವಲ ನೂರು ರೂಪಾಯಿಗಳಿದ್ದು, ನಿಮ್ಮ ಖಾತೆಗೆ ನಮ್ಮಿಂದ ಹಣ ಪಾವತಿಸಲು ಕಷ್ಟವಾಗುತ್ತದೆ. ಬೇರೆ ಖಾತೆಯ ನಂಬರ್ ಕೊಡಿ ಎಂದು ಕೇಳಿದ್ದಾರೆ. ವಂಚಕರ ಉದ್ದೇಶವನ್ನು ಅರಿತ ಹೋಟೆಲ್ ಮಾಲೀಕರು ತಮಾಷೆಯಾಗಿ ಉತ್ತರಿಸುತ್ತ ಕಳ್ಳರಿಂದ ಹೆಚ್ಚಿನ ದಾಖಲಾತಿಗಳನ್ನು ಪಡೆದ ನಂತರ ನೇರವಾಗಿ ಹೋಟೆಲ್ಗೆ ಬಂದು ಹಣ ಪಾವತಿಸಿ ಪಾರ್ಸೆಲ್ ತೆಗೆದುಕೊಂಡು ಹೋಗುವಂತೆ ಸೂಚಿಸಿ ಫೋನ್ ಕಟ್ ಮಾಡಿದ್ದಾರೆ.
ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಫುಡ್ ಲ್ಯಾಂಡ್ ಹೋಟೆಲ್ ಮಾಲೀಕ ಅನೀಸ್ ಅವರು, ಇಂಥಹ ವಂಚನೆ ಪ್ರಕರಣಗಳು ಮಾಧ್ಯಮಗಳಲ್ಲಿ ನಾವು ನೋಡುತ್ತಿದ್ದೆವು. ಆದ್ದರಿಂದ ವಂಚಕರ ಬಲೆಗೆ ಬೀಳದೆ ತಪ್ಪಿಸಿಕೊಂಡಿದ್ದೇವೆ. ಪ್ರತೀ ವರ್ಷ ಮಲೆನಾಡಿನ ಬಾಗಕ್ಕೆ ಹೊಸ ವರ್ಷಾಚರಣೆ ಸಂಭ್ರಮಾಚರಣೆಗೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ಫೋನ್ ಮಾಡಿ ಊಟ ಆರ್ಡರ್ ಮಾಡುತ್ತಾರೆ. ಪ್ರತೀ ಬಾರಿಯಂತೆ ಇದೂ ಕೂಡ ಒಂದು ಎಂದು ಊಟ ಪಾರ್ಸೆಲ್ ತಯಾರಿ ಮಾಡಿ ಕರೆ ಮಾಡಿದ್ದೆವು. ಆದರೆ ಎದುರು ಕಡೆಯಿಂದ ಮಾತಿನ ವರಸೆಯಲ್ಲಿ ಬದಲಾವಣೆ ಕಾಣುತ್ತಿದ್ದಂತೆ ನಾವು ಎಚ್ಚರಗೊಂಡು ಜಾಗೃತೆಯಿಂದ ವ್ಯವಹರಿಸಿದ್ದರಿಂದ ಅಪಾಯದಿಂದ ತಪ್ಪಿಕೊಂಡಿದ್ದೇವೆ. ನಮ್ಮಗಳ ರೀತಿಯಲ್ಲಿಯೇ ಎಲ್ಲರೂ ಜಾಗೃತೆಯಿಂದ ಇರಲು ಬಹುತೇಕ ಸಂದರ್ಭಗಳಲ್ಲಿ ಸಾಧ್ಯವಿರುವುದಿಲ್ಲ. ಆದರೂ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಇಂಥಹ ಕರೆಗಳ ಬಗ್ಗೆ ಜಾಗೃತರಾಗಿರಬೇಕು ಎಂದು ಮನವಿ ಮಾಡಿದರು.
ಒಟ್ಟಾರೆ ನಗರ ಪ್ರದೇಶಗಳಿಗೆ ಹಾಗೂ ಜನಸಾಮಾನ್ಯರಿಗೆ ಸೀಮಿತವಾಗಿದ್ದ ವಂಚನೆಯ ಬಿಸಿ ಇದೀಗ ಸ್ಥಳೀಯ ಮಟ್ಟದ ವ್ಯಾಪಾರಸ್ಥರಿಗೆ ಮುಟ್ಟಲು ಪ್ರಾರಂಭವಾಗಿದ್ದು, ತಮ್ಮ ದೈನಂದಿನ ಒತ್ತಡದ ವ್ಯವಹಾರದ ನಡುವೆ ಇಂಥಹ ವಂಚಕರ ಜಾಲಗಳಿಂದ ತಪ್ಪಿಸಿಕೊಳ್ಳುವ ಅನಿವಾರ್ಯತೆ ಬೇರೆ ಎದುರಾಗಿದೆ ಎಂದರು. ಎಲ್ಲವನ್ನೂ “ ಈ ಮನಿ ಹಾಗೂ ಡಿಜಿಟಲ್ ಮಾದರಿ”ಯಲ್ಲಿ ಎಂಬ ಹೆಸರಿನಲ್ಲಿ ವ್ಯವಹಾರ ನಡೆಸಿ ಎಂದು ಸರಕಾರ ಹೇಳುತ್ತಿದ್ದರೆ, ಸೈಬರ್ ಕ್ರೈಂ ಕಳ್ಳರನ್ನು ಮೊದಲು ಮಟ್ಟಹಾಕಬೇಕು ಎಂಬುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.










