ಮೈಸೂರು : ರಷ್ಯಾ ಉಕ್ರೇನ್ ಯುದ್ಧದ ಈ ಸಂದರ್ಭದಲ್ಲಿ ಭಾರತ ಮಧ್ಯಸ್ಥಿಕೆ ವಹಿಸುವುದು ಸುಲಭವಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಷ್ಯಾ ಅಧ್ಯಕ್ಷರೇ ನಮ್ಮ ಪ್ರಧಾನಿಗೆ ಕರೆ ಮಾಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ವಿಚಾರದ ಬಗ್ಗೆ ಯಾವ ರೀತಿ ನಿರ್ಧಾರ ಕೈಗೊಳ್ಳಬೇಕು ಎಂದು ಮೋದಿಯವರಿಗೆ ಗೊತ್ತಿದೆ. ಮೋದಿ ಮತ್ತು ಪುಟಿನ್ ನಡುವೆ ಒಳ್ಳೆಯ ಸಂಬಂಧವಿದೆ. ಆದ್ರೆ ಅವರ ನಡುವಿನ ಮಾತುಕತೆ ಬಗ್ಗೆ ನನಗೆ ಗೊತ್ತಿಲ್ಲ. ಪ್ರಪಂಚದ ಎಲ್ಲಾ ರಾಷ್ಟ್ರಗಳಿಗೂ ಅವರವರ ದೇಶದ ವಿಚಾರವಾಗಿ ಸ್ವಾರ್ಥ ಮುಖ್ಯ. ಉಕ್ರೇನ್ ನನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ರಷ್ಯಾ ಮುಂದಾಗಿದೆ. ಈ ಹಿಂದೆ ಅಮೆರಿಕ ಕೂಡ ಯಾವೆಲ್ಲಾ ನಿರ್ಧಾರ ಕೈಗೊಂಡಿತ್ತು ಎಂದು ಗೊತ್ತಿದೆ. ಹಾಗಾಗಿ ಈ ಸಮಸ್ಯೆಯನ್ನು ಅಷ್ಟು ಸುಲಭವಾಗಿ ಬಗೆಹರಿಸುವುದು ಸಾಧ್ಯವಿಲ್ಲ ಎಂದರು.
ಯುದ್ಧದಿಂದ ಜಗತ್ತಿನಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧವಿದೆ. ಭಾರತ ಸರ್ಕಾರ ಸಭೆ ನಡೆಸಿ, ಏರ್ ಇಂಡಿಯಾ ವಿಮಾನಗಳ ಮೂಲಕ ಸ್ಥಳಾಂತರ ಮಾಡುವ ಕೆಲಸವನ್ನು ಮಾಡಲಾಗುತ್ತಿದೆ. ಮೊದಲನೇ ಹಂತದಲ್ಲಿ ಭಾರತೀಯರನ್ನು ಒಂದು ವಿಮಾನದಲ್ಲಿ ಈಗಾಗಲೇ ಸ್ಥಾಳಾಂತರಿಸಲಾಗಿದೆ ಎಂದು ಹೇಳಿದರು.










