ಮಂಗಳೂರು: ಉಳ್ಳಾಲದ ಕೇಂದ್ರ ಬಸ್ ನಿಲ್ದಾಣದಲ್ಲಿರುವ ಸ್ವಾಮಿ ಕೊರಗಜ್ಜ ಮತ್ತು ಗುಳಿಗಜ್ಜನ ಕ್ಷೇತ್ರದ ಕಾಣಿಕೆ ಹುಂಡಿಗೆ ಕಿಡಿಗೇಡಿಗಳು ಕಾಂಡೋಮ್ ಮತ್ತು ನಿಂದನಾರ್ಹ ಬರಹಗಳುಳ್ಳ ಭಿತ್ತಿಪತ್ರವನ್ನು ಹಾಕಿ ವಿಕೃತಿ ಮೆರೆದಿದ್ದಾರೆ.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಅವರ ಪುತ್ರ ವಿಜಯೇಂದ್ರ ಹಾಗೂ ಇನ್ನಿತರ ಬಿಜೆಪಿ ನಾಯಕರ ಚಿತ್ರಗಳನ್ನು ವಿರೂಪಗೊಳಿಸಿ ಅವಹೇಳನಕಾರಿ ಬರಹಗಳನ್ನು ಬರೆಯಲಾಗಿದೆ.
ಉಳ್ಳಾಲದ ಕೊರಗಜ್ಜ ಸೇವಾ ಸಮಿತಿಯವರು ಪ್ರತಿ ತಿಂಗಳ ಸಂಕ್ರಾಂತಿಯಂದು ಕಾಣಿಕೆ ಡಬ್ಬಿಯ ಹಣ ತೆಗೆಯುವ ವಾಡಿಕೆ ಹೊಂದಿದ್ದು, ಈ ಬಾರಿ ಸ್ವಲ್ಪ ತಡವಾಗಿ ಅಂದರೆ ಮಂಗಳವಾರ ಸಂಜೆ ಕಾಣಿಕೆ ಡಬ್ಬಿ ತೆರೆದಿದ್ದು, ಡಬ್ಬಿಯ ಒಳಗೆ ಕಾಂಡೋಮ್ಗಳು ಹಾಗೂ ಪ್ರಚೋದನಕಾರಿ ಬರಹಗಳು ಇದ್ದಂತಹ ಪ್ಲೆಕ್ಸ್ ಒಂದು ಕಂಡು ಬಂದಿದೆ.
ಈ ಬಗ್ಗೆ ಕೊರಗಜ್ಜ ಸೇವಾ ಸಮಿತಿಯವರು ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿಗಳನ್ನು ಬಂಧಿಸಲು ಒತ್ತಾಯಿಸಿದ್ದಾರೆ.
ಕೆಲದಿನಗಳ ಹಿಂದೆ ನಗರದ ಮೂರು ದೈವಸ್ಥಾನಗಳಲ್ಲೂ ಕಾಣಿಕೆ ಹುಂಡಿಗೆ ಇದೇ ರೀತಿ ಅವಹೇಳನಕಾರಿ ಬರಹ, ಕಾಂಡೋಮ್ ಹಾಕಲಾಗಿತ್ತು.










