ಚಿಕ್ಕಮಗಳೂರು:ಮಕ್ಕಳು ವಿದ್ಯಾರ್ಥಿ ದೆಸೆಯಲ್ಲೇ ಪರಿಸರದ ಬಗ್ಗೆ ಕಾಳಜಿ ಮತ್ತು ಪ್ರೀತಿಯನ್ನು ಬೆಳೆಸಿಕೊಳ್ಳಬೇಕು: ಜಗದೀಶ್.

182
ಚಿಕ್ಕಮಗಳೂರು:ಮಕ್ಕಳು ವಿದ್ಯಾರ್ಥಿ ದೆಸೆಯಲ್ಲೇ ಪರಿಸರದ ಬಗ್ಗೆ ಕಾಳಜಿ ಮತ್ತು ಪ್ರೀತಿಯನ್ನು ಬೆಳೆಸಿಕೊಳ್ಳಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಬಿಆರ್‍ಪಿ ಅಧಿಕಾರಿ ಜಗದೀಶ್ ಸಲಹೆ ಮಾಡಿದರು.
ನಗರದ ಆಜಾದ್ ಪಾರ್ಕ್ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಬುಧವಾರ ಡಾ|| ಎ.ಪಿ.ಜೆ ಅಬ್ದುಲ್ ಕಲಾಂ ಇಕೋ ಕ್ಲಬ್ ಉದ್ಘಾಟಿಸಿ ನಂತರ ನಡೆದ ಸಮಾರಂಭದಲ್ಲಿ  ಅವರು ಮಾತನಾಡಿದರು.
ಗಿಡ ಮರ, ಪ್ರಾಣಿ ಪಕ್ಷಿಗಳಿಗೂ ಜೀವವಿದೆ, ಅವೂ ಸಹ ನಮ್ಮಂತೇ ಉಸಿರಾಡುತ್ತವೆ, ನಮ್ಮ ದುರಾಸೆಯಿಂದಾಗಿ ಹಾಳಾಗಿರುವ ಪರಿಸರವನ್ನು ಉಳಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದರು.
ವಿದ್ಯಾರ್ಥಿಗಳು ಪರಿಸರದ ಬಗ್ಗೆ ಕಾಳಜಿ ಮತ್ತು ಪ್ರೀತಿಯನ್ನು ಬೆಳೆಸಿಕೊಂಡರೆ ಮಾತ್ರ ಸುಂದರ ಪರಿಸರ ಮುಂದಿನ ತಲೆಮಾರಿಗೆ ಉಳಿಯುತ್ತದೆ ಹಾಗಾಗಿ ವಿದ್ಯಾರ್ಥಿಗಳು ಜಾಗೃತರಾಗಬೇಕು, ಭೂಮಿ ಮಾಲಿನ್ಯ, ವಾಯು ಮಾಲಿನ್ಯ, ಜಲ ಮಾಲಿನ್ಯ ಮತ್ತು ಶಬ್ದ ಮಾಲಿನ್ಯವನ್ನು ತಡೆಗಟ್ಟಲು ಮುಂದಾಗಬೇಕು ಎಂದು ಕಿವಿ ಮಾತು ಹೇಳಿದರು.
ನಗರ ಕ್ಲಸ್ಟರ್-2 ರ ಸಿಆರ್‍ಪಿ ಪ್ರದೀಪ್ ಮಾತನಾಡಿ ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿಯನ್ನು ಬೆಳೆಸುವ ನಿಟ್ಟಿನಲ್ಲಿ ತಾಲ್ಲೂಕಿನ 119 ಹಾಗೂ ನಗರ ಕ್ಲಸ್ಟರ್-2 ರ 11 ಶಾಲೆಗಳಲ್ಲಿ ಇಕೋ ಕ್ಲಬ್‍ಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಇಕೋ ಕ್ಲಬ್‍ನ ಮಾರ್ಗದರ್ಶಿ ಶಿಕ್ಷಕ ಎಸ್.ಈ. ಲೋಕೇಶ್ವರಾಚಾರ್ ಕ್ಲಬ್ ಮುಖಾಂತರ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ ಕುರಿತ ವಿವಿಧ ಸ್ಪರ್ಧೆಗಳನ್ನು ನಡೆಸಲಾಗುವುದು, ವಿಜೇತರಿಗೆ ಬಹುಮಾನ ನೀಡಲಾಗುವುದು ಎಂದು ಹೇಳಿದರು.
ಮುಖ್ಯ ಶಿಕ್ಷಕಿ ಬಿ.ಆರ್.ಗೀತಾ ಅಧ್ಯಕ್ಷತೆ ವಹಿಸಿದ್ದರು, ಶಿಕ್ಷಕರಾದ ನಾಗವೇಣಿ ಸ್ವಾಗತಿಸಿದರು, ಜಯಂತಿ ವಂದಿಸಿದರು.