ಬೆಂಗಳೂರು : ಮನೆ ಬಾಡಿಗೆ ಹಣ ನೀಡಲಿಲ್ಲ ಎಂದು ಬಾಡಿಗೆದಾರರ ಮೇಲೆ ಮನೆ ಓನರ್ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ರಾಜಗೋಪಾಲ ನಗರದ ಲಗ್ಗೆರೆಯಲ್ಲಿ ನಡೆದಿದೆ. ಪೂರ್ಣಿಮಾ ಹಲ್ಲೆಗೊಳಗಾದ ಮಹಿಳೆ. ಪೂರ್ಣಿಮಾ ಹಾಗೂ ರವಿಚಂದ್ರ ದಂಪತಿ ಮಹಾಲಕ್ಷ್ಮಿ ಎಂಬುವವರ ನಿವಾಸದಲ್ಲಿ ಬಾಡಿಗೆಗೆ ಇದ್ದರು. ದಂಪತಿ ಕಳೆದ ನಾಲ್ಕು ತಿಂಗಳಿನಿಂದ ಬಾಡಿಗೆ ಹಣ ನೀಡಿರಲಿಲ್ಲ. ಇದರಿಂದ ಅಸಾಮಾಧಾನಗೊಂಡಿದ್ದ ಮನೆ ಓನರ್ ಮಹಾಲಕ್ಷ್ಮಿ ಮನೆ ಬಳಿ ತೆರಳಿ ಬಾಡಿಗೆ ಹಣ ನೀಡುವಂತೆ ಜಗಳ ಮಾಡಿದ್ದಾರೆ. ಈ ವೇಳೆ ಪೂರ್ಣಿಮಾ ಅವರು ಅಡ್ವಾನ್ಸ್ ಹಣದಲ್ಲಿ ಕಡಿತ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಮಹಾಲಕ್ಷ್ಮಿ ಅವರು ಮನೆಯಲ್ಲಿದ್ದ ಚಾಕುವಿನಿಂದ ಪೂರ್ಣಿಮಾ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಬಳಿಕ ಕೂಡಲೇ ಸ್ಥಳೀಯರು ಪೂರ್ಣಿಮಾ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ರಾಜಗೋಪಾಲ ನಗರ ಪೊಲೀಸರು ಪರಿಶೀಲನೆ ನಡೆಸಿ ಮನೆ ಓನರ್ ಮಹಾಲಕ್ಷ್ಮಿ ಅವರನ್ನು ಬಂಧಿಸಿದ್ದಾರೆ.










