ಹಿರಿಯ ಸಮಾಜವಾದಿ ನಾಯಕ, ಮಾಜಿ ಕೇಂದ್ರ ಸಚಿವ ಶರದ್ ಯಾದವ್ (75) ಅವರು ನಿಧನರಾಗಿದ್ದಾರೆ.
ಇತ್ತೀಚೆಗೆ ಶರದ್ ಯಾದವ್ ಆರೋಗ್ಯದಲ್ಲಿ ಏರುಪೇರಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಗುರುಗ್ರಾಮ್ ನ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ತಂದೆಯ ಸಾವಿನ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪುತ್ರಿ ಸುಭಾಷಿಣಿ ಶರದ್ ಯಾದವ್ ಟ್ವಿಟರ್ ಪೋಸ್ಟ್ ಮಾಡಿದ್ದಾರೆ. ‘ನನ್ನ ತಂದೆ ಇನ್ನಿಲ್ಲ’ ಎಂದು ಭಾವುಕರಾಗಿ ಟ್ವೀಟ್ ಮಾಡುವ ಮೂಲಕ ನಿಧನದ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಹಿರಿಯ ನಾಯನಕ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಶರದ್ ಯಾದವ್ ಅವರು 1947ರ ಜುಲೈ 1ರಂದು ಮಧ್ಯಪ್ರದೇಶದ ಹೋಶಂಗಾಬಾದ್ ಬಳಿಯ ಒಂದು ಸಣ್ಣ ಹಳ್ಳಿಯಲ್ಲಿ ರೈತರ ಕುಟುಂಬದಲ್ಲಿ ಜನಿಸಿದರು. 2003ರಿಂದ 2016ರವರೆಗೆ ಜೆಡಿಯು ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ಮಧ್ಯಪ್ರದೇಶದ ಜಬಲ್ಪುರದಿಂದ ಮೊದಲ ಬಾರಿಗೆ ಲೋಕಸಭೆಗೆ ಪ್ರವೇಶಿಸಿದ್ದ ಶರದ್ ಯಾದವ್, ಲೋಕಸಭೆ ಸದಸ್ಯರಾಗಿ 7 ಸಲ, ರಾಜ್ಯಸಭೆ ಸದಸ್ಯರಾಗಿ 4 ಸಲ ಆಯ್ಕೆಯಾಗಿದ್ದರು.
1997ರಲ್ಲಿ ಲಾಲು ಪ್ರಸಾದ್ ಯಾದವ್ ಜನತಾ ದಳದಿಂದ ಬೇರ್ಪಟ್ಟು ತಮ್ಮದೇ ಆದ ರಾಷ್ಟ್ರೀಯ ಜನತಾ ದಳವನ್ನು ಸ್ಥಾಪಿಸಿದ್ದರು. ಅದಾದ ನಂತರ ನಿತೀಶ್ ಕುಮಾರ್ ಜೊತೆಗೆ ಶರದ್ ಯಾದವ್ ಸುದೀರ್ಘ ರಾಜಕೀಯ ಪಯಣ ಮಾಡಿದ್ದರು. ಇಬ್ಬರ ನಡುವಿನ ಬಿರುಕಿನ ನಂತರ, ಶರದ್ ಯಾದವ್ ಅವರು ಲೋಕ ತಾಂತ್ರಿಕ ಜನತಾ ದಳ ಎಂಬ ಪಕ್ಷವನ್ನು ಸ್ಥಾಪಿಸಿದ್ದರು. ಇತ್ತೀಚೆಗೆ ಆ ಪಕ್ಷವನ್ನು ಲಾಲು ಪ್ರಸಾದ್ ಪಕ್ಷದಲ್ಲಿ ವಿಲೀನಗೊಳಿಸಿದ್ದರು.










