ಮಹಾರಾಷ್ಟ್ರದಲ್ಲಿ ಭೀಕರ ರಸ್ತೆ ಅಪಘಾತ – 10 ಮಂದಿ ಸಾವು…

42
firstsuddi

ಮುಂಬೈ: ಶಿರಡಿ ಸಾಯಿ ಬಾಬಾ ದರ್ಶನಕ್ಕೆ ತೆರಳುತ್ತಿದ್ದ ಬಸ್ಸೊಂದು ಭೀಕರ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ 10 ಮಂದಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಸಿನ್ನಾರ್ ಬಳಿಯ ನಾಸಿಕ್-ಶಿರಡಿ ಹೆದ್ದಾರಿಯ ಪತ್ತಾರೆ ಗ್ರಾಮದ ಬಳಿ ಇಂದು ಬೆಳಗ್ಗೆ ನಡೆದಿದೆ.

ಶಿರಡಿ ಸಾಯಿಬಾಬಾ ದೇವರ ದರ್ಶನಕ್ಕಾಗಿ ತೆರಳುತ್ತಿದ್ದ ಬಸ್, ಟ್ರಕ್‌ವೊಂದಕ್ಕೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದ್ದು, 10 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ 10 ಮಂದಿಯಲ್ಲಿ ಐವರು ಮಹಿಳೆಯರು, ಮೂವರು ಪುರುಷರು ಹಾಗೂ ಇಬ್ಬರು ಮಕ್ಕಳಿದ್ದಾರೆ. ಇನ್ನೂ ಘಟನೆಯಲ್ಲಿ ಗಾಯಗೊಂಡವರಿಗೆ ಸಿನ್ನಾರ್ ಗ್ರಾಮಾಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ಹೆದ್ದಾರಿಯನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅಪಘಾತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಸಿಎಂ ಕಚೇರಿ ಪ್ರಕಟಣೆ ಮೂಲಕ ತಿಳಿಸಿದೆ.