ಮುಖ್ಯಮಂತ್ರಿ ಬದಲಾವಣೆ ಕೇವಲ ಕಪೋಲಕಲ್ಪಿತ : ನಳಿನ್ ಕುಮಾರ್ ಕಟೀಲ್.

82
firstsuddi

ಬೆಂಗಳೂರು : ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ. ಮುಂದಿನ 2023ರ ಚುನಾವಣೆಯವರೆಗೆ ಬೊಮ್ಮಾಯಿಯವರೇ ಮುಖ್ಯಮಂತ್ರಿ ಆಗಿರುತ್ತಾರೆ. ಮುಖ್ಯಮಂತ್ರಿ ಬದಲಾವಣೆ ಕೇವಲ ಕಪೋಲಕಲ್ಪಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲಿ ಅರಾಜಕತೆ ಹುಟ್ಟುಹಾಕಲು ಇಂತಹ ಸುದ್ದಿ ಹರಡಿಸುತ್ತಾರೆ. ಮುಂದಿನ ಚುನಾವಣೆ ಸಾಮೂಹಿಕ ನಾಯಕತ್ವದಲ್ಲಿ ಎದುರಿಸುತ್ತೇವೆ. ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ. ಸಿಎಂಗೆ ಯಾವುದೇ ಅನಾರೋಗ್ಯ ಇಲ್ಲ, ಕಾಲು ನೋವು ಮಾತ್ರ ಇದೆ. ಅದಕ್ಕೆ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಬೊಮ್ಮಾಯಿ ಅವರು ವಿದೇಶಕ್ಕೂ ಹೋಗಲ್ಲ, ಇಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುತ್ತಾರೆ ಎಂದು ಹೇಳಿದರು.

ಇದೇ ವೇಳೆ ಮತಾಂತರ ನಿಷೇಧ ಕಾಯ್ದೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಮತಾಂತರದಿಂದ ಸಾಮಾಜಿಕ ಕಲಹ ಆಗುತ್ತಿತ್ತು. ಅದಕ್ಕೆ ತಡೆಯೊಡ್ಡಲು ಕಾಯ್ದೆ ಜಾರಿ ಮಾಡಲಾಗಿದೆ. ಬೊಮ್ಮಾಯಿ ಒಳ್ಳೆ ನಿರ್ಧಾರ ಮಾಡಿದ್ದಾರೆ. ಕಾಂಗ್ರೆಸ್ ವಿರೋಧ ಮಾಡುವುದು ಸಹಜ. ಸಿದ್ದರಾಮಣ್ಣನೇ ಮತಾಂತರ ನಿಷೇಧ ಕಾಯ್ದೆಗೆ ಸಹಿ ಹಾಕಿದ್ದಾರೆ. ಅಧಿಕಾರ ಇದ್ದಾಗ ಒಂದು, ಇಲ್ಲದಾಗ ಒಂದು. ಕಾಂಗ್ರೆಸ್ ಶಾಸಕರೇ ನಾವು ತಂದ ಕಾಯ್ದೆ ಪರವಾಗಿದ್ದಾರೆ ಎಂದರು.