ಮೂಡಿಗೆರೆ : ಹಾಸನ ಜಿಲ್ಲೆ ಬೇಲೂರು ತಾಲೂಕಿನ ಅರೇಹಳ್ಳಿಯಿಂದ ಶ್ರೀಗಂಧದ ಮರಗಳ ಕಳ್ಳತನಕ್ಕೆ ಬಂದಿದ್ದ ಐದು ದೆವ್ವಗಳಿಗೆ ಗ್ರಾಮಸ್ಥರು ಕಂಬಕ್ಕೆ ಕಟ್ಟಿ ಪೂಜೆ ಮಾಡಿರುವ ಘಟನೆ ತಾಲೂಕಿನ ಜಿ.ಹೊಸಳ್ಳಿ ಗ್ರಾಮದ ಕಾಡಂಚಿನಲ್ಲಿ ನಡೆದಿದೆ. ಹಲವು ದಿನಗಳಿಂದ ಶ್ರೀಗಂಧ ಕಳ್ಳತನವನ್ನೇ ಪ್ರಮುಖ ಕೆಲಸವನ್ನಾಗಿಸಿಕೊಂಡಿದ್ದ ಕಳ್ಳರು ದೆವ್ವದ ಮುಖವಾಡವನ್ನು ಧರಿಸಿ ಗ್ರಾಮದ ಜನರಲ್ಲಿ ಭೀತಿ ಹುಟ್ಟಿಸಿದ್ದರು ಎನ್ನಲಾಗಿದ್ದು, ಇದನ್ನೇ ಬಂಡವಾಳ ಮಾಡಿಕೊಂಡು ಈ ಕಳ್ಳರ ಗುಂಪು ಹಲವಾರು ದಿನಗಳಿಂದ ಶ್ರೀಗಂಧ ಕಳ್ಳತನ ಮಾಡುತ್ತಿದ್ದರು ಎನ್ನಲಾಗಿದ್ದು, ದೆವ್ವದ ವೇಷ ಧರಿಸಿ ಗ್ರಾಮಸ್ಥರನ್ನು ಭಯಭೀತಿಗೊಳಿಸಿದ್ದರಿಂದ ರಾತ್ರಿ ವೇಳೆಯಲ್ಲಿ ಗ್ರಾಮಸ್ಥರು ಮನೆಯಿಂದ ಹೊರಬರಲು ಭಯಬೀಳುತ್ತಿದ್ದರು. ಜಿ.ಹೊಸಳ್ಳಿ ಗ್ರಾಮದ ಕಾಡಂಚಿನಲ್ಲಿದ್ದ ಐದು ಶ್ರೀಗಂಧದ ಮರಗಳನ್ನ ಕದಿಯೋಕೆಂದು ಅರೇಹಳ್ಳಿಯಿಂದ ಐವರು ಕಳ್ಳರು ಆಟೋದಲ್ಲಿ ಬಂದಿದ್ದ ಇವರು ಊರ ಹೊರಗಡೆ ಮರ ಕಡಿಯುತ್ತಿರೋ ಶಬ್ಧವನ್ನ ಕೇಳಿದ ಗ್ರಾಮಸ್ಥರು ಸ್ಥಳಕ್ಕೆ ಬಂದಿದ್ದಾರೆ. ಸ್ಥಳಿಯರು ಸ್ಥಳಕ್ಕೆ ಬರುತ್ತಿದ್ದಂತೆ ಗಂಧದ ಕಳ್ಳರು ಮುಖಕ್ಕೆ ದೆವ್ವದ ಮುಖವಾಡ ಹಾಕಿ ಗ್ರಾಮಸ್ಥರನ್ನು ಹೆದರಿಸಲು ಪ್ರಯತ್ನಿಸಿದ್ದಾರೆ. ಆದರೆ ಸ್ಥಳೀಯ ಯುವಕರು ಕೇಳಬೇಕೆ. ಇದು ಯಾವ ದೆವ್ವ. ಹೆಣ್ಣೋ-ಗಂಡೋ ನೋಡಲೇಬೇಕೆಂದು ಅಟ್ಟಿಸಿಕೊಂಡು ಹೋಗಿದ್ದಾರೆ. ಸ್ಥಳಿಯರು ಮುನ್ನುಗ್ತಿರೋದನ್ನು ಕಂಡ ಗಂಧದ ದೆವ್ವಗಳು ಕಾಲಿಗೆ ಬುದ್ಧಿ ಹೇಳಿ, ಮುಖದಿಂದ ಮಾಸ್ಕ್ ತೆಗೆದು ಓಡಿದ್ದಾರೆ. ಐವರಲ್ಲಿ ಪಾಪ ಒಂದು ದೆವ್ವ ಸಿಕ್ಕಿಬಿದ್ದಿದ್ದು, ಸಿಕ್ಕಿ ಬಿದ್ದ ದೆವ್ವಕ್ಕೆ ಊರಿನ ಜನ ಕಂಬಕ್ಕೆ ಕಟ್ಟಿ ದೆವ್ವದ ಮೈಮೇಲೆ ದೇವರು ಬರುವಂತೆ ಹಿಗ್ಗಾಮುಗ್ಗಾ ಭಾರಿಸಿದ್ದಾರೆ. ಐವರಲ್ಲಿ ನಾಲ್ವರು ತಪ್ಪಿಸಿಕೊಂಡಿದ್ದು, ಬಂಧಿತನಿಂದ ಐದು ಶ್ರೀಗಂಧದ ತುಂಡು, ಆಟೋ ಹಾಗೂ ಬೈಕ್ ಸೇರಿದಂತೆ ಮುಖವಾಡವನ್ನ ಅರಣ್ಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಬಂಧಿತನನ್ನ ರುದ್ರಯ್ಯ ಎಂದು ಗುರುತಿಸಲಾಗಿದ್ದು, ದೆವ್ವದ ವೇಷ ಹಾಕಿ ಕಳ್ಳತನಕ್ಕೆ ಬಂದವನಿಗೆ ಸ್ಥಳಿಯರು ಕಂಬಕ್ಕೆ ಕಟ್ಟಿ ಮಂಗಳಾರತಿ ಮಾಡಿ ಅರಣ್ಯ ಇಲಾಖೆ ವಶಕ್ಕೆ ನೀಡಿದ್ದಾರೆ.










