ಮೂಡಿಗೆರೆ : ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ‘ಎಸ್‍ಪಿಬಿ’ ಅವರು ಹಾಡದೇ ಇರುವ ಶೈಲಿಯೇ ಇಲ್ಲ : ರಮೇಶ್ ಭರಧ್ವಾಜ್.

464
firstsuddi

ಮೂಡಿಗೆರೆ : ಸರಸ್ವತಿಯ ಪುತ್ರರಾಗಿದ್ದ ಎಸ್‍ಪಿಬಿ ಅವರ ಪ್ರತಿಭೆಗೆ ಅವರೇ ಸಾಟಿ. ಅವರ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲ. ಅಗಲಿದ ಅವರ ಆತ್ಮಕ್ಕೆ ಭಗವಂತನು ಸದ್ಗತಿ ಕರುಣಿಸಲಿ ಎಂದು ಮೂಡಿಗೆರೆ ತಾಲ್ಲೂಕು ಬ್ರಾಹ್ಮಣರ ಸಂಘದ ಸದಸ್ಯ ರಮೇಶ್ ಭರದ್ವಾಜ್ ತಿಳಿಸಿದರು.
ಪಟ್ಟಣದ ಚೈತನ್ಯ ಮಿನಿ ಹಾಲ್‍ನಲ್ಲಿ ತಾಲ್ಲೂಕು ಬ್ರಾಹ್ಮಣ ಮಹಾ ಸಭೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಗಲಿದ ಚೇತನ ಎಸ್.ಪಿ.ಬಾಲಸುಬ್ರಹ್ಮಣ್ಯ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ‘ಎಸ್‍ಪಿಬಿ’ ಅವರು ಹಾಡದೇ ಇರುವ ಶೈಲಿಯೇ ಇಲ್ಲ. ಕಳೆದ ಐದು ದಶಕಗಳಲ್ಲಿ ಡಾ. ಎಸ್‍ಪಿಬಿ ಅವರು 15ಕ್ಕೂ ಹೆಚ್ಚು ಭಾಷೆಗಳಲ್ಲಿ ಚಿತ್ರಗೀತೆ, ಭಕ್ತಿಗೀತೆ, ಭಾವಗೀತೆ, ರಾಷ್ಟ್ರಭಕ್ತಿಗೀತೆ ಹೀಗೆ ವಿವಿಧ ಪ್ರಕಾರಗಳಲ್ಲಿ 50,000ಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ ಎಂದರು.
ಸದಸ್ಯ ಎಂ.ಹೆಚ್.ಅಮರನಾಥ್ ಮಾತನಾಡಿ, ಅವರ ಭಕ್ತಿ ಗೀತೆಗಳು ಚಿತ್ರ ಗೀತೆಗಳನ್ನು ಕೇಲಿದಷ್ಟು ಕೇಳಬೇಕು ಎನ್ನಿಸುವಂತಿತ್ತು. ನನ್ನ ಮುಂದಿನ ಜನ್ಮ ಅನ್ನೋದು ಇದ್ದರೆ ಕನ್ನಡನಾಡಲ್ಲೇ ಕನ್ನಡಿಗನಾಗಿ ಹುಟ್ಟಿ ಇವರ ಋಣ ತೀರಿಸುತಿನಿ ! ಎಂದು ಕನ್ನಡಿಗರ ಮೇಲಿರುವ ತಮ್ಮ ಪ್ರೀತಿಯನ್ನು ಹಂಚಿಕೊಂಡ ಭಾರತ ಸಂಗೀತ ಲೋಕದ ಹಿರಿಮೆಯ ಗಾಯಕ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಬಾರದ ಲೋಕಕ್ಕೆ ತೆರಳಿದ್ದಾರೆ ಎಂದರು.
ಸಂಘದ ಅಧ್ಯಕ್ಷ ಶರತ್‍ಚಂದ್ರ ಮಾತನಾಡಿ, ಎಸ್‍ಪಿಬಿ ಅವರು ಕನ್ನಡ, ತೆಲುಗು, ತಮಿಳು, ಹಿಂದಿ ಹೀಗೆ ಅನೇಕ ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದಾರೆ ಎಂದರೆ ಅವರ ಸೃಜನಶೀಲತೆಯ ಅಂತಃಸತ್ವ ಎಷ್ಟೊಂದು ಸಮರ್ಥವಾಗಿತ್ತು ಎಂಬುದನ್ನು ಅರ್ಥೈಸಿಕೊಳ್ಳಬಹುದು. ಆದರೆ ಅವರ ಮೊದಲ ಪ್ರೀತಿ ಮತ್ತು ಒಲವು ಕನ್ನಡದ ಬಗ್ಗೆ ಇತ್ತು ಎಂಬುದು ಹೆಮ್ಮೆಯ ಸಂಗತಿ. ಅನೇಕ ಗೌರವ ಡಾಕ್ಟರೇಟ್ ಗಳಿಂದ ಹಿಡಿದು ಪದ್ಮ ಪ್ರಶಸ್ತಿವರೆಗೆ ಅನೇಕ ಪುರಸ್ಕಾರಗಳು ಅವರ ಪ್ರತಿಭೆಗೆ ಸಂದಿದ್ದವು ಎಂದರು.
ಈ ಸಂದರ್ಭದಲ್ಲಿ ಸದಸ್ಯರುಗಳಾದ ರಮಾನಂದ್ ಭಟ್, ಹಳೇಕೋಟೆ ಸೂರ್ಯಶೇಖರ್ ಭಟ್, ಚಂದ್ರಶೇಖರ್ ಭಟ್, ದಿನೇಶ್, ಶ್ರೀರಾಂ, ಸೋಮಶೇಖರ್, ಶ್ರೀಮತಿ ಶಾರದ ಶೇಖರ್ ಉಪಸ್ಥಿತರಿದ್ದರು ಅಗಲಿದ ಚೇತನಕ್ಕೆ ಶೃದ್ದಾಂಜಲಿ ಅರ್ಪಿಸಿದರು.