ಮೂಡಿಗೆರೆ : ಮಿಷನ್ ಸಾಹಸಿ ಕಾರ್ಯಕ್ರಮವು ಹೆಣ್ಣು ಮಕ್ಕಳಿಗೆ ಪೂರಕವಾಗಿದ್ದು, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ವಿರೋಧಿ ಹಾಗೂ ಆತ್ಮರಕ್ಷಣೆ ಕಾರ್ಯಕ್ರಮಗಳ ಬೆಂಗಾವಲಾಗಿದೆ ಎಂದು ಸ್ಥಳೀಯ ಪ್ರತಿಭೆ ಹಾಗೂ ಕನ್ನಡ ಚಿತ್ರನಟ ರವಿತೇಜ ಹೊಸಕೆರೆ ಅವರು ಹೇಳಿದರು.
ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಮೂಡಿಗೆರೆ ಘಟಕದ ವತಿಯಿಂದ ಪಟ್ಟಣದ ಜೆಸಿಐ ಸಭಾಂಗಣದಲ್ಲಿ ಆಯೋಜಿಸಿದ್ದ ‘ಮಿಷನ್ ಸಾಹಸಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹೆಣ್ಣುಮಕ್ಕಳು ಜನ್ಮಥಃ ಧೈರ್ಯಶಾಲಿಗಳು ಆದರೆ ಸಮಾಜದಲ್ಲಿ ಅವರ ಮೇಲೆ ನಿರಂತರವಾಗಿ ಆಗುತ್ತಿರುವ ಶೋಷಣೆಗಳಿಂದಾಗಿ ತಮ್ಮ ಧೈರ್ಯ ಪ್ರದರ್ಶಿಸಲು ಹಿಂದೇಟು ಹಾಕುತ್ತಿದ್ದಾರೆ. ಒಬ್ಬ ಹೆಣ್ಣು ಮಗಳು ವಿವಿಧ ಆಯಾಮಗಳಲ್ಲಿ ತನ್ನ ಪಾತ್ರಗಳನ್ನು ಜವಾಬ್ದಾರಿಯುತವಾಗಿ ನಿರ್ವಹಣೆ ಮಾಡುತ್ತಾಳೆ. ಹೆಣ್ಣುಮಕ್ಕಳನ್ನು ತಾಯಿಗೆ ಹೋಲಿಕೆ ಮಾಡಿ ಗೌರವಿಸುವ ಸಂಸ್ಕೃತಿ ನಮ್ಮದು. ಹೈದರಾಬಾದ್ನಲ್ಲ್ಲಿ ನಡೆದ ಅತ್ಯಾಚಾರ ಪ್ರಕರಣ ಎಲ್ಲರೂ ತಲೆ ತಗ್ಗಿಸಬೇಕಾದ ಕೃತ್ಯ. ಸಮಾಜದ ಕೆಲವು ಘಾತುಕ ಶಕ್ತಿಗಳಿಂದ ಆಗುವ ದೌರ್ಜನ್ಯದಿಂದಾಗಿ ವಿಶ್ವದ ಎದುರು ತಲೆ ತಗ್ಗಿಸುವಂತೆ ಆಗಿದೆ. ಎಲ್ಲರೂ ಸಮಾನ ಮನಸ್ಕರಾಗಿ ಇಂಥಹ ಕೆಟ್ಟ ಘಟನೆಗಳ ವಿರುದ್ಧ ಹೋರಾಡಬೇಕು ಎಂದರು.
ಹೆಣ್ಣುಮಕ್ಕಳು ಸಮಾಜದಲ್ಲಿ ಮುಂದೆ ಬರುವುದರ ಭರದಲ್ಲಿ ತಮ್ಮ ಸಂಸ್ಕೃತಿಯನ್ನು ಕಡೆಗಣಿಸಬಾರದು. ಪ್ರಾಕೃತಿಕವಾಗಿ ತಮಗೆ ಇರುವ ಇತಿಮಿತಿಗಳನ್ನು ಅರಿತು ಮುಂದುವರೆಯುವುದು ಎಲ್ಲಾ ದೃಷ್ಟಿಯಿಂದ ಒಳಿತು. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ಹೆಚ್ಚು ತೊಡಗಿಸಿಕೊಳ್ಳುವುದನ್ನು ಕಡಿಮೆ ಮಾಡಬೇಕು, ಅಪರಿಚಿತ ವ್ಯಕ್ತಿಗಳ ಬಳಿ ತಮ್ಮ ಖಾಸಗಿ ವಿಚಾರಗಳನ್ನು ಹಂಚಿಕೊಳ್ಳುವುದನ್ನು ಮಾಡಬಾರದು. ಹೆಣ್ಣು ಮಕ್ಕಳು ಕ್ಲಿಷ್ಟಕರ ಸನ್ನಿವೇಶಗಳನ್ನು ಎದುರಿಸಲು ಆತ್ಮ ರಕ್ಷಣೆ ಮಾಡಿಕೊಳ್ಳುವಂಥಹ ಕಲೆಗಳನ್ನು ಕಲಿಯಬೇಕು. ಮಿಷನ್ ಸಾಹಸಿ ಇಂಥಹ ಕಾರ್ಯಗಳಿಗೆ ವೇದಿಕೆಯನ್ನು ಕಲ್ಪಿಸಿ ಕೊಡುತ್ತಿದೆ. ಇದೊಂದು ಉತ್ತಮ ಪ್ರಯತ್ನ. ಇಂಥಹ ಕಾರ್ಯಗಳು ಎಲ್ಲೆಡೆ ಹರಡಬೇಕು ಎಂದರು.
ಪ್ರಾಸ್ಥಾವಿಕ ಭಾಷಣ ಮಾಡಿದ ದೀಕ್ಷಿತ್ ಅವರು 1949ರ ಜುಲೈ 9ರಂದು ಸ್ಥಾಪನೆಯಾದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಹಲವಾರು ಚಳುವಳಿಗಳಲ್ಲಿ ಭಾಗವಹಿಸಿ ತನ್ನದೇ ಆದ ಸೇವೆ ಮಾಡುತ್ತ ಬಂದಿದೆ. ಇದರ ಯಶಸ್ಸು ಇಂದು ಹೆಚ್ಚು ಹೆಚ್ಚು ವಿದ್ಯಾರ್ಥಿಗಳನ್ನು ತರಬೇತಿ ಮಾಡಿ ದೇಶಕ್ಕೆ ಕೊಡುಗೆ ನೀಡುವ ಕಾರ್ಯದಲ್ಲಿ ನಿರತವಾಗಿದೆ. ನಾಯಕತ್ವದ ಗುಣ, ಅನ್ಯಾಯಗಳ ವಿರುದ್ಧ ಪ್ರತಿಭಟಿಸುವುದು ಸೇರಿದಂತೆ ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಯೋಧ ವಾಸು ಅವರು ವಿದ್ಯಾರ್ಥಿನಿಯರಿಗೆ ಕರಾಟೆ ಮಾಡಿಸುವ ಮೂಲಕ ಆತ್ಮರಕ್ಷಣೆ ಕಲೆಗಳ ಮಹತ್ವ ತಿಳಿಸಿಕೊಟ್ಟರು. ವೇದಿಕೆಯಲ್ಲಿ ಎಬಿವಿಪಿ ಜಿಲ್ಲಾ ವಿದ್ಯಾರ್ಥಿನಿ ಪ್ರಮುಖ್ ಬೆಟ್ಟಗೆರೆ ಕೀರ್ತನಾ, ಜಿಲ್ಲಾ ವಿದ್ಯಾರ್ಥಿ ಪ್ರಮುಖ್ ಗುತ್ತಿ ಶಶಾಂಕ್, ನಗರ ಕಾರ್ಯದರ್ಶಿ ಲೋಕವಳ್ಳಿ ಸ್ವಾತಿ ಇದ್ದರು. ಸ್ವಾಗತವನ್ನು ಕೆಂಜಿಗೆ ಪ್ರಾಪ್ತಿ, ಪ್ರಾರ್ಥನೆಯನ್ನು ನಿಶ್ಚಿತ ಹಾಗೂ ವಂದನಾರ್ಪಣೆಯನ್ನು ಹೇಮ ಅವರು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಸ್ಥಳೀಯರು ಸೇರಿದಂತೆ ವಿವಿಧ ಶಾಲಾಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.










