ಮೂಡಿಗೆರೆ : ಕೊರೋನಾ ಸೋಂಕು ಭೀತಿ-ರಸ್ತೆಗೆ ಅಡ್ಡಲಾಗಿ ಬಲಿಗೆ ಗ್ರಾಮಸ್ಥರಿಂದ ಗೇಟ್ ನಿರ್ಮಾಣ…

356
firstsuddi

ಮೂಡಿಗೆರೆ : ನಮ್ಮ ಗ್ರಾಮಕ್ಕೂ ಕೊರೋನಾ ಸೋಂಕು ತಗುಲಬಹುದು ಎನ್ನುವ ಆತಂಕದ ಹಿನ್ನೆಲೆಯಲ್ಲಿ ಬಲಿಗೆ ಗ್ರಾಮಸ್ಥರು ರಸ್ತೆಗೆ ಅಡ್ಡಲಾಗಿ ಕಳಸ ಗ್ರಾಮ ಪಂಚಾಯತಿ ವ್ಯಾಪ್ತಿಯ ಗಾಳಿಗುಡ್ಡಕ್ಕೆ ತೆರಳುವ ರಸ್ತೆಗೆ ಅಡ್ಡಲಾಗಿ ಗೇಟ್ ನಿರ್ಮಾಣ ಮಾಡಿ ಹೊರಗಿನವರಿಗೆ ನಿರ್ಬಂಧ ಹೇರಿದ್ದಾರೆ.
ಲಾಕ್‍ಡೌನ್ ಅವಧಿಯಲ್ಲೂ ಅನೇಕ ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಆದರೆ ಇದೀಗ ಲಾಕ್‍ಡೌನ್ ನಿರ್ಬಂಧ ಇಲ್ಲದಿರುವುದರಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಹೊರಗಿನಿಂದ ಬರುವ ಯಾವುದೇ ಪ್ರವಾಸಿಗರಲ್ಲಿ ಸೋಂಕು ಇಲ್ಲ ಎಂದು ನೇರವಾಗಿ ಖಚಿತಪಡಿಸಿಕೊಳ್ಳಲು ಕಷ್ಟವಾಗಿರುವುದರಿಂದ ಇದು ಗ್ರಾಮಸ್ಥರ ಆತಂಕವಾಗಿದೆ. ಸದ್ಯ ಗೇಟ್ ನಿರ್ಮಾಣ ಮಾಡಿ ಸೋಂಕಿನ ಪ್ರಭಾವ ದೇಶದಲ್ಲಿ ಇಳಿಮುಖವಾಗುವವರೆಗೂ ಗ್ರಾಮಕ್ಕೆ ಪ್ರವಾಸಿಗರನ್ನು ತಡೆಹಿಡಿಯುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಹಲವರಿಗೆ ಇದು ಕಷ್ಟಕರವಾಗಬಹುದು ಆದರೆ ಎಲ್ಲರೂ ಸಹಕರಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಗೇಟ್ ನಿರ್ಮಾಣದ ವಿರುದ್ಧ ದೂರು : ತನ್ನ ಮನೆಗೆ ತೆರಳಲು ಇರುವ ಏಕೈಕ ರಸ್ತೆಯನ್ನು ಬಲಿಗೆ ಗ್ರಾಮಸ್ಥರು ಮುಚ್ಚಿದ್ದಾರೆ. ಇದರಿಂದಾಗಿ ತನ್ನ ದೈನಂದಿನ ವ್ಯಹಾರಗಳಿಗೆ ಕಷ್ಟವಾಗುತ್ತದೆ ಎಂದು ಗಿರಿಜನ ಕುಟುಂಬದ ಲಿಂಗಪ್ಪ ಅವರು ಕಳಸ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕಳಸ ವಲಯ ಅರಣ್ಯ ಅಧಿಕಾರಿ ವಿಜಯಕುಮಾರ್ ಅವರು, ಗಾಳಿಗುಡ್ಡ ಸುಂದರ ದೃಶ್ಯವನ್ನು ಸವಿಯಲು ಪ್ರವಾಸಿಗರ ಆಗಮನವಾಗುವುದು ಹೊಸತೇನಲ್ಲ. ಆದರೆ ಬಲಿಗೆ ಗ್ರಾಮಸ್ಥರು ಯಾವುದೇ ಅನುಮತಿ ಪಡೆಯದೆ ಗೇಟ್ ನಿರ್ಮಾಣ ಮಾಡಿದ್ದಾರೆ ಎಂದು ಹಲವು ದೂರುಗಳು ಕೇಳಿ ಬಂದಿದೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.