ಮೂಡಿಗೆರೆ : ಚಾಲಕನ ನಿಯಂತ್ರಣ ತಪ್ಪಿ ಶಿಫ್ಟ್ ಕಾರೊಂದು ರಸ್ತೆ ಬದಿಯ ಹಳ್ಳಕ್ಕೆ ಪಲ್ಟಿಯಾಗಿರುವ ಘಟನೆ ತಾಲ್ಲೂಕಿನ ಜಾವಳಿ ಸಮೀಪದ ಮೂಲೆಮನೆ ಗ್ರಾಮದಲ್ಲಿ ನಡೆದಿದೆ. ಶಿಫ್ಟ್ ಕಾರಿನಲ್ಲಿ ಒಟ್ಟು ನಾಲ್ವರು ಬೆಂಗಳೂರಿನಿಂದ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ತೆರಳುತ್ತಿದ್ದರು. ಈ ವೇಳೆ ಇಂದು ಬೆಳಗ್ಗಿನ ಜಾವ 4 ಗಂಟೆ ಸುಮಾರಿಗೆ ಮೂಲೆಮನೆ ಗ್ರಾಮದ ಬಳಿ ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಬದಿಯಿದ್ದ ಹಳ್ಳಕ್ಕೆ ಪಲ್ಟಿಯಾಗಿದ್ದು, ಕೂಡಲೇ ಹಿಂದೆ ಚಲಿಸುತ್ತಿದ್ದ ವಾಹನ ಸವಾರರು ಹಾಗೂ ಸ್ಥಳೀಯರು ಧಾವಿಸಿ ಕಾರಿನಲ್ಲಿ ಇದ್ದವರನ್ನು ರಕ್ಷಿಸಿದ್ದು, ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ತಿರುವಿನಲ್ಲಿ ಪದೇ ಪದೇ ಇಂತಹ ಘಟನೆಗಳು ಮರುಕಳಿಸುತ್ತಲೇ ಇದ್ದು, ಅಧಿಕಾರಿಗಳ ಗಮನಕ್ಕೆ ತಂದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ. ಈ ಘಟನೆಗೆ ರಸ್ತೆ ಬದಿಯ ಹಳ್ಳಕ್ಕೆ ತಡೆಗೋಡೆ ನಿರ್ಮಿಸದೇ ಇರುವುದೇ ಪ್ರಮುಖ ಕಾರಣ ಎಂದು ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.










