ಮೂಡಿಗೆರೆ : ನಿಲ್ಲದ ಮಳೆಯ ಆರ್ಭಟ ; ಕಾಫಿ, ಅಡಿಕೆ ಒಣಗಿಸಲು ಬೆಂಕಿಯ ಮೊರೆ ಹೋದ ರೈತರು…

134
firstsuddi

ಕೊಟ್ಟಿಗೆಹಾರ : ಮೂಡಿಗೆರೆ ತಾಲ್ಲೂಕಿನಾದ್ಯಂತ ಬಿಟ್ಟು ಬಿಡದೇ ಮಳೆ ಸುರಿಯುತ್ತಿದ್ದು ಕಾಫಿ, ಅಡಿಕೆಯನ್ನು ಒಣಗಿಸಲು ರೈತರು ಬೆಂಕಿಯ ಮೊರೆ ಹೋಗಿದ್ದಾರೆ.

ಮೂಡಿಗೆರೆ ತಾಲ್ಲೂಕಿನ ನಿಡುವಾಳೆ, ನಿಡ್ನಳ್ಳಿ, ಗಬ್ಗಲ್, ಮಾಲಿಂಗನಾಡು, ಜಾವಳಿ, ಕೆಳಗೂರು, ಹೆಮ್ಮಕ್ಕಿ, ಹೊಳೆಕೂಡಿಗೆ ಮುಂತಾದ ಕಡೆಗಳಲ್ಲಿ ರೈತರು ಮೇಲ್ಭಾಗದಲ್ಲಿ ತಗಡಿನ ಮೇಲೆ ಕಾಫಿ, ಅಡಿಕೆಯನ್ನು ಹರಡಿ ಕೆಳಭಾಗದಲ್ಲಿ ಬೆಂಕಿಯನ್ನು ಹಾಕಿ ಬೆಳೆಯನ್ನು ಒಳಗಿಸುತ್ತಿದ್ದಾರೆ.

ಅಡಿಕೆಯನ್ನು ಕುಯ್ಲು ಮಾಡಿ ಬೇಯಿಸಿ ಮಳೆಯಿಂದಾಗಿ ಒಣಗಿಸಲು ಸಾಧ್ಯವಾಗದೇ ಅನಿವಾರ್ಯವಾಗಿ ಅಡಿಕೆ ಬೆಳೆಗಾರರು ಬೆಂಕಿಯ ಮೊರೆ ಹೋಗಿದ್ದಾರೆ. ಕಾಫಿ ಕುಯ್ಲು ಮಾಡಿ ಚೀಲದಲ್ಲಿ ತುಂಬಿ ಇಟ್ಟರೆ ಕೊಳೆಯುವ ಸಾಧ್ಯತೆ ಇರುವುದರಿಂದ ಕಾಫಿ ಬೆಳೆಗಾರರು ಸಹ ಬೆಂಕಿಯಲ್ಲಿ ಕಾಫಿಯನ್ನು ಒಣಗಿಸುವಂತಾಗಿದೆ.

ಹೀಗೆ ಬೆಂಕಿಯಿಂದ ಅಡಿಕೆ, ಕಾಫಿಯನ್ನು ಒಣಗಿಸಿದಾಗ ಅದರ ಗುಣಮಟ್ಟ ಕಡಿಮೆಯಾಗುವುದರಿಂದ ಬೆಳೆಗಳಿಗೆ ಸರಿಯಾದ ಬೆಲೆ ಸಿಗುವುದಿಲ್ಲ. ಆದರೆ ಒಣಗಿಸದೇ ಹಾಗೆ ಇಟ್ಟರೆ ಅಡಿಕೆ, ಕಾಫಿ ಕೊಳೆತು ಉಪಯೋಕ್ಕೆ ಬಾರದಂತಾಗುವುದರಿಂದ ರೈತರು ಅನಿವಾರ್ಯವಾಗಿ ಬೆಂಕಿಯಲ್ಲಿ ಒಣಗಿಸುತ್ತಿದ್ದಾರೆ.

ಅಡಿಕೆ, ಕಾಫಿಯನ್ನು ಒಣಗಿಸಲು ಸೌದೆಯೂ ಕೂಡ ಮಳೆಯಿಂದಾಗಿ ನೆನೆದಿರುವುದರಿಂದ ತೋಟಗಳಲ್ಲಿ ಹೆಕ್ಕಿ ತಂದ ಸೌದೆಯಿಂದ ಬೆಂಕಿ ಮಾಡಿ ಅಡಿಕೆ, ಕಾಫಿಯನ್ನು ಒಣಗಿಸುವುದು ಹೆಚ್ಚು ಶ್ರಮದ ಕೆಲಸವಾಗಿದೆ.

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ನಿಡ್ನಳ್ಳಿಯ ಅಡಿಕೆ ಬೆಳೆಗಾರರಾದ ಸುಂದರೇಶ್, ಮಳೆ ಬಿಡುವು ನೀಡದೇ ಇರುವುದರಿಂದ ಅಡಿಕೆಯನ್ನು ಒಣಗಿಸಲು ಹರಸಾಹಸ ಪಡುವಂತಾಗಿದೆ. ಮಳೆ ಬಿಡುವ ಲಕ್ಷಣ ಕಾಣದೇ ಇರುವುದರಿಂದ ಅನಿವಾರ್ಯವಾಗಿ ತಗಡಿನ ಮೇಲೆ ಅಡಿಕೆಯನ್ನು ಹರಡಿ ಬೆಂಕಿಯಲ್ಲಿ ಅಡಿಕೆಯನ್ನು ಒಳಗಿಸುತ್ತಿದ್ದೇವೆ ಎಂದರು.