ಮೂಡಿಗೆರೆ ಪ್ರವಾಸೋದ್ಯಮವನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಿರುವುದು ವಿಷಾದಕರ -ಮಗ್ಗಲಮಕ್ಕಿ ಗಣೇಶ್.

401
firstsuddi

ಮೂಡಿಗೆರೆ: ಚಿಕ್ಕಮಗಳೂರಿನಲ್ಲಿ ಮಂಗಳವಾರದಂದು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೇವಲ ಚಿಕ್ಕಮಗಳೂರು ಭಾಗಕ್ಕೆ ಮಾತ್ರ ಅಭಿವೃದ್ಧಿ ಕಾರ್ಯಗಳನ್ನು ಕೇಂದ್ರೀಕರಣಗೊಳಿಸಲಾಗಿದೆ ಎಂದು ಮೂಡಿಗೆರೆ ಕ.ಸಾ.ಪ ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್ ಅವರು ಗಂಭೀರವಾಗಿ ಆರೋಪ ಮಾಡಿದ್ದಾರೆ. ಮೂಡಿಗೆರೆಯ ವ್ಯಾಪ್ತಿಯಲ್ಲಿ ಹಲವಾರು ಪ್ರವಾಸಿ ತಾಣಗಳಿದ್ದು ಮೂಡಿಗೆರೆ ಪ್ರವಾಸೋದ್ಯಮವನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಿರುವುದು ವಿಷಾದಕರ. ಮೂಡಿಗೆರೆಯ ಪ್ರಮುಖ ಸ್ಥಳಗಳಾದ ಕುದುರೆಮುಖ, ಕೆಸವಳಲು, ಕೂಡಿಗೆ, ದೇವರಮನೆ, ಗೋಣಿಬೀಡು ಆದಿ ಸುಬ್ರಹ್ಮಣ್ಯ ದೇವಸ್ಥಾನ, ದೇವರಮನೆ, ಜಾವಳಿಯ ಹೇಮಾವತಿ ನದಿಮೂಲ, ದೇವರಮನೆ, ಬಲ್ಲಾಳರಾಯನ ದುರ್ಗ, ಕೊಟ್ಟಿಗೆಹಾರದ ಮಲಯಮಾರುತ ನೈಸರ್ಗಿಕ ತಾಣ, ಸ್ಥಳೀಯ ತೋಟಗಾರಿಕೆ ಕಾಲೇಜಿನ ‘ತೋಟಗಾರಿಕಾ ಪ್ರವಾಸೋದ್ಯಮ’, ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಜೀವವೈವಿಧ್ಯ ಸಂಶೋಧನಾ ಕೇಂದ್ರದ ಅಭಿವೃದ್ಧಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಒಂದೇ ಒಂದು ಪ್ರಸ್ತಾಪ ಮಾಡದಿರುವುದು ಇಲಾಖೆಯ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ. ಈ ರೀತಿಯ ನಡವಳಿಕೆಗಳು ಜಿಲ್ಲೆಯೊಳಗೆ ಪ್ರಾದೇಶಿಕ ಅಸಮತೋಲನ ಉಂಟುಮಾಡಲು ಕಾರಣವಾಗಲಿದೆ. ಈ ವಿಚಾರವಾಗಿ ಪ್ರವಾಸೋದ್ಯಮ ಇಲಾಖೆಯ ಸಚಿವರಿಗೆ ಪ್ರಸ್ಥಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.