ಕೊಟ್ಟಿಗೆಹಾರ: ರಾಜ್ಯದ ರೈತ ಕಾರ್ಮಿಕರಿಗೆ ಮಾರಕವಾದ ಬಂಡವಾಳಿಗರ ಪರವಾಗಿರುವ ಕರ್ನಾಟಕ ಭೂಸುಧಾರಣಾ ಕಾಯಿದೆ ತಿದ್ದುಪಡಿ, ಎಪಿಎಂಸಿ ಕಾಯಿದೆ ತಿದ್ದುಪಡಿ, ಕಾರ್ಮಿಕ ಕಾಯಿದೆ ತಿದ್ದುಪಡಿ ಸುಗ್ರೀವಾಜ್ಞೆ ವಾಪಾಸು ಪಡೆಯಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿಯ ವತಿಯಿಂದ ಬಣಕಲ್ ಗ್ರಾ.ಪಂ ಮುಖಾಂತರ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.
ರೈತ ಸಂಘದ ರಾಜ್ಯ ಮಹಿಳಾ ಉಪಾದ್ಯಕ್ಷೆ ವನಶ್ರೀ ಲಕ್ಷ್ಮಣಗೌಡ ಮಾತನಾಡಿ ಸರ್ಕಾರ ಅವೈಜ್ಞಾನಿಕ ಸುಳ್ಳುಗಳನ್ನು ಹರಿಬಿಟ್ಟು ಅನ್ನದಾತರನ್ನು ಕಾರ್ಮಿಕರನ್ನು ದುಡಿವ ಜನಸಮುದಾಯವನ್ನು ವಂಚಿಸಿ ಕಾರ್ಪೋರೇಟ್ ಶಕ್ತಿಗಳಿಗೆ ಮಣೆ ಹಾಕುವ ಭೂಸುಧಾರಣೆ ಕಾಯ್ದೆ, ಎಪಿಎಂಸಿ ಕಾಯಿದೆ, ಕಾರ್ಮಿಕ ಕಾಯಿದೆಗಳಿಗೆ ತಂದಿರುವ ತಿದ್ದುಪಡಿ ಸುಗ್ರಿವಾಜ್ಞೆಯನ್ನು ಸರ್ಕಾರ ತಕ್ಷಣ ಹಿಂಪಡೆಯಬೇಕು. ಎಲ್ಲಾ ಭೂಮಿ ಮತ್ತು ವಸತಿ ವಂಚಿತರ ಬೇಡಿಕೆಗಳನ್ನು ಈಡೇರಿಸುವ ಮೂಲಕ ಅರ್ಥಪೂರ್ಣ ಭೂಸುಧಾರಣೆ, ಎಲ್ಲಾ ದುಡಿವ ಕೈಗಳಿಗೆ ಉದ್ಯೋಗ ಸಿಗುವಂತ ಮತ್ತು ವಿದೇಶಿ ಬಹುರಾಷ್ಟ್ರೀಯ ಕಂಪನಿ ಹಾಗೂ ದೇಶಿ ದೊಡ್ಡ ಬಂಡವಾಳಿಗರ ಲುಟಿಗೆ ಅವಕಾಶ ಇಲ್ಲದಿರುವಂತಹ ಜನಪರ ಕಾನೂನನ್ನು ಜಾರಿ ಮಾಡಬೇಕು ಎಂದರು.
ಅಖಿಲ ಭಾರತ ರೈತ ಸಂಫರ್ಘ ಸಮಿತಿ ರಾಜ್ಯ ಸಂಚಾಲಕ ಗೌಸ್ ಮೊಹಿದ್ದೀನ್ ಮಾತನಾಡಿ ಸ್ಪರ್ದಾತ್ಮಕ ಬೆಲೆ, ಮಾರುಕಟ್ಟೆಯ ಹೆಸರಿನಲ್ಲಿ ರಾಜ್ಯದ ಎಪಿಎಂಸಿ ಕಾಯ್ದೆಗೆ ತಿದ್ದುಪಡಿಗಳನ್ನು ತಂದು ರೈತ ವಿರೋದಿ, ಕಾರ್ಪೋರೇಟ್ ಕಂಪನಿಗಳ ಪರವಾದ ನೀತಿಯನ್ನು ಸುಗ್ರಿವಾಜ್ಞೆ ಮೂಲಕ ಜಾರಿ ಮಾಡಲು ಸರ್ಕಾರ ಮುಂದಾಗಿದೆ. ದೀರ್ಘಕಾಲದ ಕೃಷಿ ಬಿಕ್ಕಟ್ಟಿನಿಂದ ನರಳುತ್ತಿರುವ ರೈತರಿಗೆ ಕರೊನಾ ರೋಗ ಉಂಟು ಮಾಡಿರುವ ಭಯಾನಕ ಸ್ಥಿತಿಯಿಂದ ರಕ್ಷಿಸಲು ಕೃಷಿ ಮಾರುಕಟ್ಟೆಗಳನ್ನು ಮತ್ತಷ್ಟು ಹೆಚ್ಚು ರೈತ ಪರವಾಗಿ ಬಲಪಡಿಸಬೇಕಿರುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಂಜುನಾಥಗೌಡ, ತಾಲ್ಲೂಕು ಅಧ್ಯಕ್ಷ ಪುಟ್ಟಸ್ವಾಮಿಗೌಡ, ಮಹಿಳಾ ತಾಲ್ಲೂಕು ಉಪಾಧ್ಯಕ್ಷೆ ಶಕುಂತಲಾ ಜಗದೀಶ್, ಕಾರ್ಯದರ್ಶಿ ನಾಗೇಶ್‍ಗೌಡ, ಪ್ರಜ್ವಲ ಮುಂತಾದವರು ಇದ್ದರು.










