ಮೂಡಿಗೆರೆ : ಬಗರ್ ಹುಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿ ನೀಡಿ ಎಂದು ಭೂ ಹಕ್ಕುದಾರರ ವೇದಿಕೆಯಿಂದ ತಹಶೀಲ್ದಾರಿಗೆ ಮನವಿ…

199
First Suddi

ಕೊಟ್ಟಿಗೆಹಾರ : ಜಿಲ್ಲೆಯ ಸಣ್ಣ ಹಾಗೂ ಬಡ ಅರ್ಹ ಬಗರ್ ಹುಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿ ನೀಡಬೇಕು ಎಂದು ಕರ್ನಾಟಕ ಭೂ ಹಕ್ಕುದಾರರ ವೇದಿಕೆಯ ವತಿಯಿಂದ ಮೂಡಿಗೆರೆ ತಹಶೀಲ್ದಾರ್ ರಮೇಶ್ ಅವರಿಗೆ ಮನವಿ ಸಲ್ಲಿಸಲಾಯಿತು.

ವೇದಿಕೆಯ ತಾಲ್ಲೂಕು ಸಂಚಾಲಕ ಪೂವಪ್ಪ ಮಾತನಾಡಿ ಹಲವಾರು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿರುವ ಸಣ್ಣ ರೈತರು ಸಾಗುವಳಿ ಚೀಟಿಗಾಗಿ ಅರ್ಜಿ ಸಲ್ಲಿಸಿ ದಶಕಗಳೇ ಕಳೆದರೂ ಇದುವರೆಗೆ ಬೆರಳೆಣಿಕೆ ರೈತರಿಗೆ ಮಾತ್ರ ಹಕ್ಕು ಪತ್ರ ಸಿಕ್ಕಿದ್ದು ಬಹುತೇಕರಿಗೆ ಬಗರ್ ಹುಕುಂ ಜಮೀನುಗಳ ಹಕ್ಕು ಪತ್ರ ಸಿಕ್ಕಿಲ್ಲ. ಇದರಿಂದ ಬಡರೈತರಿಗೆ ನೆಲೆ ಇಲ್ಲದಂತಾಗಿದೆ ಎಂದರು.

ಭೂ ಹಕ್ಕುದಾರರ ವೇದಿಕೆಯ ಸಹ ಸಂಚಾಲಕ ಕುಮಾರ್ ಮಾತನಾಡಿ ಗ್ರಾಮೀಣ ಜನರು ತಮ್ಮ ಜೀವನೋಪಾಯಕ್ಕಾಗಿ ಹಾಗೂ ಆಹಾರ ಭದ್ರತೆಗಾಗಿ ಜಮೀನನ್ನೆ ಅವಲಂಬಿಸಿದ್ದಾರೆ. ಭೂಮಿಯ ಮೇಲಿನ ಹಕ್ಕು ಎಂಬುದು ಈ ವರ್ಗದ ಜನರ ಸಂವಿಧಾನಾತ್ಮಕ ಹಕ್ಕಾಗಿದ್ದು ಸಣ್ಣ ಹಾಗೂ ಬಡ ಅರ್ಹ ಬಗರ್ ಹುಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಕಮರಗೋಡು ಗ್ರಾಮ ಸಮಿತಿ ವೇದಿಕೆ ಅಧ್ಯಕ್ಷ ಕೃಷ್ಣಪ್ಪ, ಜಾವಳಿ ಗ್ರಾಮ ಸಮಿತಿ ವೇದಿಕೆ ಅಧ್ಯಕ್ಷೆ ಸುನೀತಾ, ಸದಸ್ಯರಾದ ಕುಸುಮಾ, ಗೌರಿ, ಕಮಲ, ಸುಂದರಿ ಇದ್ದರು.