ಮೂಡಿಗೆರೆ: ವ್ಯರ್ಥವಾದ ಸರ್ಕಾರದ ಅನುದಾನ: ಮುಗಿಯದ ನೀರಿನ ಭವಣೆ

245

ಕೊಟ್ಟಿಗೆಹಾರ: ಬೇಸಿಗೆ ಬಿಸಿ ದಿನದಿಂದ ದಿನಕ್ಕೆ ಏರುತ್ತಿದ್ದು ತರುವೆ ಗ್ರಾ.ಪಂ ವ್ಯಾಪ್ತಿಯ ಮಂಡಲದಿಣ್ಣೆ ಅಂತರ್ಜಾಲ ಕುಸಿತದಿಂದಾಗಿ ನೀರಿಗೆ ಪರದಾಡುವಂತಾಗಿದೆ. ನೀರು ಸಣ್ಣ ಪ್ರಮಾಣದಲ್ಲಿ ಬರುತ್ತಿದ್ದು ಸಮರ್ಪಕವಾಗಿ ನೀರು ಬರದೇ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ.
ಗ್ರಾಮೀಣ ಜನರಿಗೆ ಸರ್ಕಾರ ಯೋಜನೆಗಳನ್ನು ರೂಪಿಸಿ ಮೂಲಭೂತ ಸೌಕರ್ಯಗಳಾದ ರಸ್ತೆ, ಕುಡಿಯುವ ನೀರು, ಮುಂತಾದ ಸವಲತ್ತುಗಳನ್ನು ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಆದರೆ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಸಮೀಪದ ಮಂಡಲದಿಣ್ಣೆ ಗ್ರಾಮಕ್ಕೆ ಸಮರ್ಪಕ ರಸ್ತೆ, ಕುಡಿಯುವ ನೀರು ಇಲ್ಲದೇ ಗ್ರಾಮಸ್ಥರು ಪರದಾಡುವ  ಸ್ಥಿತಿ ನಿರ್ಮಾಣವಾಗಿದೆ.
5 ವರ್ಷದ ಹಿಂದೆ ಜಿಲ್ಲಾ ಪಂಚಾಯತಿ ಅನುದಾನದಲ್ಲಿ 8 ಲಕ್ಷ ಹಣ ಬಿಡುಗಡೆಯಾಗಿದ್ದು ಗುತ್ತಿಗೆದಾರ ಹಾಗೂ ಇಂಜಿನಿಯರ್ ಸಮರ್ಪಕವಾಗಿ ಕಾಮಗಾರಿ ಮಾಡದೇ ಒಂದೊಂದು ಮನೆಗೆ ಒಂದು ಸಿಂಟೆಕ್ಸ್, 8 ಪೈಪ್‍ಗಳು 1.5 * 8 ಅಡಿ ಉದ್ದದ ಮೂರು ತಡೆಗೋಡೆಗಳನ್ನು ನಿರ್ಮಿಸಿ 6 ಮನೆಗಳಿಗೆ ನೀರಿನ ವ್ಯವಸ್ಥೆ ಮಾಡಿದರು. ಆದರೆ ಕಾಮಗಾರಿ ಸಮರ್ಪಕವಾಗಿ ಮಾಡದೇ ಕುಡಿಯುವ ನೀರಿಗೆ ತುಂಬಾ ತೊಂದರೆಯಾಗಿದೆ.
ಅಲ್ಪ ಸಂಖ್ಯಾತರು ಹಾಗೂ ಗಿರಿಜನರ 6 ಮನೆಗಳಿದ್ದು 6 ಮನೆಗಳಿಗೆ ಪೈಪ್, ಸಿಂಟೆಕ್ಸ್ ತಡೆಗೋಡೆ ಸೇರಿ 1 ಲಕ್ಷ ರೂ ವೆಚ್ಚವಾಗಿರಬಹುದು. ಗ್ರಾಮಸ್ಥರು ಗುತ್ತಿಗೆದಾರರನ್ನು ವಿಚಾರಿಸಿದಾಗ 1 ಲಕ್ಷ ಅನುದಾನ ಬಂದಿರುವುದಾಗಿ ಹೇಳಿ ಗ್ರಾಮಸ್ಥರಿಗೆ ತಪ್ಪು ಮಾಹಿತಿ ನೀಡಿ 8 ಲಕ್ಷ ರೂಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ಈ ಬಗ್ಗೆ ಗ್ರಾಮಸ್ಥರು ಜಿ.ಪಂ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಅಶ್ವಧಿ ಅವರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಅಶ್ವಧಿ ಅವರು ಜಿ.ಪಂ ಕಾರ್ಯಪಾಲಕ ಅಭಿಯಂತರ ಶಿವಕುಮಾರ್ ಅವರ ನೇತೃತ್ವದಲ್ಲಿ ತಂಡ ರಚಿಸಿ ಸ್ಥಳ ಪರಿಶೀಲನೆಗೆ ಕಳಿಸಿದ್ದು ಅಧಿಕಾರಿಗಳ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿತು.
 ಮಾತನಾಡಿದ ಕಾರ್ಯಪಾಲಕ ಅಭಿಯಂತರ ಶಿವಕುಮಾರ್, ಜಿ.ಪಂ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಅವರ ಸೂಚನೆ ಮೇರೆಗೆ ಸ್ಥಳ ಪರಿಶೀಲನೆ ನಡೆಸಿ ವಸ್ತುಸ್ಥಿತಿ ಅವಲೋಕಿಸಿದ್ದು ಕಾಮಗಾರಿ ನಡೆದು ಹಲವು ವರ್ಷಗಳೆ ಕಳೆದರೂ ಗ್ರಾಮಸ್ಥರು ಈಗ ಎಚ್ಚೆತ್ತುಕೊಂಡಿರುವುದು ವಿಪರ್ಯಾಸವೆ ಸರಿ. ಇಲ್ಲಿನ ವಸ್ತುಸ್ಥಿತಿಯನ್ನು ಮೇಲಾಧಿಕಾರಿಗಳಿಗೆ ತಿಳಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿ.ಪಂ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ನಾಗರಾಜ್, ಸಹಾಯಕ ಇಂಜಿನಿಯರ್ ಸಚ್ಚಿನ್ ಇದ್ದರು.

ಈ ಗ್ರಾಮದಲ್ಲಿ ಬಡಜನರೇ ಇದ್ದು ಈ ಕಾಮಗಾರಿಯ ಬಗ್ಗೆ ವಿಚಾರಿಸಬೇಕೆಂದರೂ ಸರಿಯಾದ ತಿಳುವಳಿಕೆ ಇಲ್ಲ. ನಮ್ಮೂರಿಗೆ ರಸ್ತೆ ವ್ಯವಸ್ಥೆಯೂ ಸರಿ ಇಲ್ಲ. ಕುಡಿಯುವ ನೀರಿನ ಕಾಮಗಾರಿ ಸರಿಯಾದ ನಿರ್ವಹಿಸದೇ ತುಂಬಾ ತೊಂದರೆಯಾಗಿದೆ ಗುತ್ತಿಗೆದಾರರು ತಪ್ಪು ಮಾಹಿತಿ ನೀಡಿ 1 ಲಕ್ಷದ ಕಾಮಗಾರಿ ಎಂದು ತಪ್ಪು ಮಾಹಿತಿ ನೀಡಿದ್ದಾರೆ. ಆದರೆ 8ಲಕ್ಷದ ಕಾಮಗಾರಿ ಎಂದು ಈಗ ತಿಳಿದು ಬಂದಿದೆ. ಜಿಲ್ಲಾಧಿಕಾರಿಗಳು ಈ ಕೂಡಲೇ ನಮಗಾದ ಅನ್ಯಾಯವನ್ನು ಕೂಡಲೇ ಸರಿಪಡಿಸಿ ಕೊಡಬೇಕು.’
                                                                                               – ಹೆಸರು ಹೇಳಲು ಇಚ್ಚಿಸದ ಗ್ರಾಮಸ್ಥ