ಬಣಕಲ್ : ಮಾನವನು ತನ್ನ ಜೀವನವನ್ನು ಸತ್ಕಾರ್ಯಗಳ ಮೂಲಕ ಸಮಾಜದಲ್ಲಿ ಆದರ್ಶವಾಗಿ ಜೀವನ ನಡೆಸಿದರೆ ಅದು ಸರ್ವರಿಗೂ ಪ್ರೇರಣೆಯಾಗುತ್ತದೆ ಎಂದು ಚಿಕ್ಕಮಗಳೂರು ಧರ್ಮಕ್ಷೇತ್ರದ ಬಿಷಪ್ ಡಾ.ಟಿ.ಅಂತೋನಿ ಸ್ವಾಮಿ ಹೇಳಿದರು.
ಅವರು ಈಚೆಗೆ ಬಣಕಲ್ನ ಧರ್ಮಗುರು ಫಾ. ಜಾರ್ಜ್ ಮೋನಿಸ್ ಅವರ ಗುರುಧೀಕ್ಷೆಯ ಬೆಳ್ಳಿಮಹೋತ್ಸವದ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗುರು ಜೀವನದಲ್ಲಿ ಕುಟುಂಬವನ್ನು ಬಿಟ್ಟು ಸಮಾಜದ ಏಳಿಗೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟು ಉತ್ತಮ ಸಕಾರ್ಯಗಳ ಮೂಲಕ ಗುರುತಿಸಿಕೊಂಡು ಸರ್ವರಿಗೂ ಪ್ರೇರಣೆಯಾಗುವ ಕಾರ್ಯ ಮಹತ್ತರವಾದುದು.ಇವರ ಈ ಗುರು ಜೀವನ ಕ್ರಿಸ್ತರ ಸನ್ಮಾರ್ಗದಲ್ಲಿ ನಡೆದು ಶತಮಾನೋತ್ಸವ ಆಚರಿಸಲಿ ಎಂದರು.
ಬೆಂಗಳೂರು ರಾಮನಗರ ಧರ್ಮಕೇಂದ್ರ ಧರ್ಮಗುರು ಫಾ.ಅಲೆಕ್ಸಾಂಡರ್ ಡೆನಿಯಲ್ ಮಾತನಾಡಿ ‘ಸಮಾಜದಲ್ಲಿ ವ್ಯಕ್ತಿಯ ಜೀವನವು ಆದರ್ಶವಾಗಿದ್ದರೆ ಅವರ ಸೇವೆಯೂ ಅಮರರವಾಗಿ ಉಳಿಯುತ್ತದೆ. ಏಸು ಕ್ರಿಸ್ತರು ಬಡವರ ಏಳಿಗೆಗಾಗಿ ಮಾನವ ರೂಪ ತಳೆದು ಜಗತ್ತಿಗೆ ಬಂದರು.ಅವರ ಆದರ್ಶ ನಮಗೆಲ್ಲಾ ದಾರಿ ದೀಪವಾಗಬೇಕು ಎಂದರು.
ಕಾಪುಚಿನ್ ಧರ್ಮಗುರುಗಳ ಮುಖ್ಯಸ್ಥರಾದ ಫಾ. ಡಾ.ಆಲ್ವಿನ್ ಡಾಯಸ್ ಮಾತನಾಡಿ,ಜಗತ್ತಿನಲ್ಲಿ ಪ್ರತಿಯೊಂದು ಧರ್ಮಗಳಲ್ಲಿಯೂ ದೀಕ್ಷೆ ಎಂಬ ಪದ ಮಹತ್ವದ ಸ್ಥಾನ ಪಡೆದಿದೆ. ದೀಕ್ಷೆ ಶಬ್ಧವಲ್ಲ ಅದೊಂದು ಶಕ್ತಿಯಾಗಿದೆ.ದೀಕ್ಷೆ ಎಂಬುದು ಕ್ಷಣ ಮಾತ್ರದಲ್ಲಿ ಲಭಿಸುವ ಆಶೀರ್ವಾದವೇ ಆದರೂ ಸಾಧನೆಗೆ ಜನ್ಮ ಪೂರ್ಣ ಸವೆಸಿದರೂ ತೃಪ್ತಿ ದೊರೆಯವುದಿಲ್ಲ. ದೀಕ್ಷೆಯನ್ನು ಬರೀ ಸಂಸ್ಕಾರದ ಭಾಗವಾಗಿ ನೋಡಿದರೆ ಸಾಲದು, ಸೃಜನಶೀಲತೆ,ಕ್ರೀಯಾಶೀಲತೆಯ ಶಕ್ತಿಯಾಗಬೇಕು ಎಂದರು.
ಬೆಳ್ಳಿ ಮಹೋತ್ಸವ ಆಚರಿಸುತ್ತಿರುವ ಧರ್ಮಗುರು ಫಾ.ಜಾರ್ಜ್ ಮೋನಿಸ್ ಅವರನ್ನು ಸಮಾರಂಭದಲ್ಲಿ ಬಿಷಪ್ ಡಾ.ಟಿ.ಅಂತೋನಿ ಸ್ವಾಮಿ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಫಾ.ಜಾರ್ಜ್ ಮೋನಿಸ್ ‘ಗುರುದೀಕ್ಷೆ ಪಡೆಯಲು ನನ್ನ ಪೋಷಕರು,ಒಡ ಹುಟ್ಟಿದವರು,ಪಾ.ವಲೇರಿಯನ್ ಡಿಸಿಲ್ವ ಕಾರಣಕರ್ತರು. ಗುರು ಜೀವನ ಮುಂದುವರೆದು ಬೆಳ್ಳಿ ಉತ್ಸವ ಕಾಣಲು ಹಲವರು ಪ್ರೋತ್ಸಾಹ ನೀಡಿದ್ದಾರೆ. ಅವರಿಗೆ ನಾನು ಅಭಾರಿಯಾಗಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ಮಂಗಳೂರಿನ ರೊನಾಲ್ಡ್ ಕ್ರಾಸ್ತಾ ಅವರಿಂದ ಸಂಗೀತ ಲಹರಿ ಕಾರ್ಯಕ್ರಮ ನಡೆಯಿತು.
ಸಮಾರಂಭದಲ್ಲಿ ಚಿಕ್ಕಮಗಳೂರು ಧರ್ಮಕ್ಷೇತ್ರದ ಗುರುಶ್ರೇಷ್ಠರಾದ ಫಾ.ರೊನಾಲ್ಡ್ ಕಾರ್ಡೋಜಾ, ಬಾಳೆಹೊನ್ನೂರು ವಲಯದ ಮುಖ್ಯ ಗುರು ಲ್ಯಾನ್ಸಿ ಪಿಂಟೊ, ಬಣಕಲ್ ಧರ್ಮಕೇಂದ್ರದ ಮುಖ್ಯ ಗುರು ಫಾ.ಆಲ್ಬರ್ಟ್ಡಿಸಿಲ್ವ, ಫಾ.ಜಾನ್ ಫೆರ್ನಾಂಡಿಸ್, ಫಾ. ಸಲ್ವಾದೊರ್ ಫೆರ್ನಾಂಡಿಸ್, ನಜರೆತ್ ಶಾಲೆಯ ಪ್ರಾಂಶುಪಾಲೆ ಸಿಸ್ಟರ್ ಹಿಲ್ಡಾ ಲೋಬೊ, ಹಾಗೂ ಜಿಲ್ಲೆಯ ವಿವಿಧ ಧರ್ಮಕೇಂದ್ರದ 62 ಮಂದಿ ಗುರುಗಳು, ಕ್ರೈಸ್ತ ಭಕ್ತಾದಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಪ್ರೆಸಿಲ್ಲಾ ಡಿ’ಸೋಜ ನಿರೂಪಿಸಿದರು. ಡೈನಾ ಲೋಬೊ ಸ್ವಾಗತಿಸಿ, ಸಿಂತಿಯಾ ಪಾಯ್ಸ್ ವಂದಿಸಿದರು.










