ಕೊಟ್ಟಿಗೆಹಾರ : ತೀರ್ಥಹಳ್ಳಿ ತಾಲ್ಲೂಕು ಮುತ್ತೂರು ಹೋಬಳಿಯ ಹಾರೋಗುಳಿಗೆ ಗ್ರಾಮದಲ್ಲಿ 15ನೇ ಶತಮಾನಕ್ಕೆ ಸೇರಿದ ವಿಜಯನಗರದ ಕಾಲದ ಶಾಸನವನ್ನು ಇತ್ತೀಚಿಗೆ ಮೂಡಿಗೆರೆ ತಾಲ್ಲೂಕಿನ ಮೇಕನಗದ್ದೆಯ ಶಾಸನ ಸಂಶೋಧಕರಾದ ಮೇಕನಗದ್ದೆ ಲಕ್ಷ್ಮಣಗೌಡ ಸಂಶೋದಿಸಿದ್ದಾರೆ.
ಶಾಸನದ ಕಾಲ ಶಕವರ್ಷ 1328 ಪಾರ್ಥಿವ ಸಂವತ್ಸರದ ಕಾರ್ತಿಕ ಶುದ್ಧ 12 ಆಗಿದ್ದು, ಇದು 4-11-1405ನೇ ದಿನಾಂಕಕ್ಕೆ ಸರಿ ಹೊಂದುತ್ತದೆ. ಆ ಕಾಲದಲ್ಲಿ ವಿಜಯ ನಗರದಲ್ಲಿ ಇಮ್ಮಡಿ ಬುಕ್ಕರಾಯನು ಆರಗದಲ್ಲಿ ವಿಠಣ್ಣವೊಡೆಯರು ಆಡಳಿತ ನಡೆಸುತ್ತಿದ್ದುದ್ದನ್ನು ಉಲ್ಲೇಖಿಸುತ್ತದೆ. ಇದು ಆರಗ ರಾಜ್ಯದ ಹದಿನೆಂಟು ಕಂಪಣದ ಮೂರು ಪಟ್ಟಣದ ಸಮಸ್ತ ಜನಗಳು ಸೇರಿ ನಿಡುವಲ್ಲನಾಡ ಹಾರುವಗೊಲಗಿಯ ದೇವಣೈಗಳ ಮಕ್ಕಳು ಬಸವಣ್ಣೈಗಳಿಗೆ ಕೊಟ್ಟಿರುವ ಭೂದಾನ ಪತ್ರ ಶಾಸನವಾಗಿದೆ.
ನಾಲ್ಕು ಅಡಿ ಎತ್ತರ ಹಾಗೂ ಮೂರು ಅಡಿ ಅಗಲದ ಕಪ್ಪು ಕಲ್ಲಿನ ಮೇಲೆ ಕೆತ್ತಲಾಗಿರುವ ಈ ಶಾಸನದ ಮೇಲ್ಬಾಗದಲ್ಲಿ ಈಶ್ವರಲಿಂಗ ಸೂರ್ಯ ಚಂದ್ರ ಹಾಗೂ ನರಸಿಂಹನ ಆಕೃತಿಗಳಿವೆ. ಇದರ ಕೆಳಭಾಗದಲ್ಲಿ 50 ಸಾಲುಗಳಲ್ಲಿ ಅತಿಸುಂದರವಾದ ದೇವನಾಗರಿ ಲಿಪಿಯಲಿ ಕನ್ನಡ ಮತ್ತು ಸಂಸ್ಕøತ ಮಿಶ್ರಭಾಷೆಯಲ್ಲಿ ಬರೆಯಲಾಗಿದೆ.
ಸುೀರ್ಘವಾದ ವಿವರಣೆಯಿರುವ ಈ ಶಾಸನದಲ್ಲಿ ಅಂದು ನೀಡಿದ ದಾನದ ವಿವರಗಳು, ಫಲಾನುಭವಿಗಳು ದಾನ ನೀಡಿದ ಭೂಮಿಯ ಚತುಸ್ಸೀಮೆಯ ಗಡಿಗಳನ್ನು ಸವಿವರವಾಗಿ ತಿಳಿಸಲಾಗಿದೆ. ಆರಗದ ಕಲಿನಾಥ ದೇವರ ಸನ್ನಿದಿಯಲ್ಲಿ ಬಸವಣೈಗಳು ಆರಾಸುತ್ತಿದ್ದ ಶ್ರೀ ವಿದ್ಯಾರಣ್ಯನಾರಸಿಂಹ ದೇವರ ಅಮೃತಪಡಿಗೆ ಎಂದು ಉಲ್ಲೇಖಿಸಿದ ದತ್ತಿಯನ್ನು ಬಿಡಲಾಗಿದೆ.
ಶಾಸನದಲ್ಲಿ ಹಾರುವಗೊಲಗಿ, ಬೈಶೆ, ನೆಕ್ಕರಿಕೆ, ಕೆಸರಾಣಿ ಮುಂತಾದ ಸ್ಥಳನಾಮಗಳಿವೆ. ಗ್ರಾಮದಲ್ಲಿ ವಾಸವಾಗಿದ್ದ ವಿವಿಧ ವೃತ್ತಿಯ ಒಕ್ಕಲುಗಳ ಸಂಖ್ಯೆಯನ್ನು ತಿಳಿಸುವ ಅಪರೂಪದ ಶಾಸನವಾಗಿದೆ. ಬೇರೆಬೇರೆ ಕೆಲಸ ಮಾಡುವ ಶೇಣಿಗದ ಒಕ್ಕಲು 13, ತುಡಿಕೆದೆರೆಯ ಒಕ್ಕಲು2 ಕಮ್ಮಾರನ ಒಕ್ಕಲು1 ಅಕ್ಕಸಾಲೆ ಒಕ್ಕಲು1 ಕಂಬಾರರ ಒಕ್ಕಲು 1 ಗೋವಿನ ಒಕ್ಕಲು1 ಮಗ್ಗದ ಒಕ್ಕಲು4 ಕಬ್ಬಿನ ಆಲೆ ಒಕ್ಕಲು1 ಅಗಸನ ಒಕ್ಕಲು 1 ಮುಂತಾದವುಗಳ ಉಲ್ಲೇಖವಿದೆ.
ಶ್ರೀ ವಿದ್ಯಾರಣ್ಯ ನರಸಿಂಹ ಸ್ವಾಮಿಯ ಆರಾಧಕರಾದ ಶ್ರೀಪಾದ ಶ್ರೀವಲ್ಲಭರಾಯರು ಹಾಗೂ ವಿವಿಧ ಗೋತ್ರಕ್ಕೆ ಸೇರಿದ ಬ್ರಾಹ್ಮಣರ ಹೆಸರನ್ನು ಉಲ್ಲೇಖಿಸುತ್ತದೆ ಕೊನೆಯಲ್ಲಿ ಶಾಪಾಶಯ ಶ್ಲೋಕವಿದೆ.
ಇತಿಹಾಸಕಾರರು ಗುರುತಿಸಿರುವಂತೆ ವಿಜಯನಗರದ ಸಂಸ್ಥಾಪಕರಲ್ಲೊಬ್ಬರಾದ ಹರಿಹರನ ಮಗನಾದ ಇಮ್ಮಡಿ ಹರಿಹರನ ನಾಲ್ಕು ಮಕ್ಕಳಲ್ಲಿ ಹಿರಿಯವನಾದ ಬುಕ್ಕರಾಯನು 1404ರಿಂದ 1406ರ ವರೆಗೆ ಕೇವಲ ಎರಡು ವರ್ಷಗಳ ಕಾಲ ಆಳ್ವಿಕೆ ನಡೆಸಿರುವುದಾಗಿ ತಿಳಿಯುತ್ತದೆ. ಈ ಅವಗೆ ಸೇರಿದವು ಕೆಲವೇ ಕೆಲವು ಶಾಸನಗಳಿದ್ದು ಅವುಗಳಲ್ಲಿ ಈ ಶಾಸನ ಅಪರೂಪದ ವಿವರಗಳನ್ನೊದಗಿಸುತ್ತದೆ.
ಸ್ಥಳೀಯ ಆಡಳಿತ ಪ್ರಾಂತ್ಯವಾಗಿದ್ದ ಆರಗ ರಾಜ್ಯದ ಆಡಳಿತ ನಡೆಸುತ್ತಿದ್ದ ವಿಠಂಣವೊಡೆಯರು ಇದುವರೆಗೆ ದೊರೆತ ಮಾಹಿತಿಗಳ ಪ್ರಕಾರ ಬೊಮ್ಮಣ್ಣವೊಡೆಯ ಹಾಗು ವಿರೂಪಾಂಬಿಕೆಯರ ಮಗ. ಈತ 1404 ರಿಂದ 1418ರ ವರೆಗೆ ಆರಗ ರಾಜ್ಯದ ಪಾಲಕನಾಗಿದ್ದ. ಆರಗದಲ್ಲಿ ಅಂದು ಹದಿನೆಂಟು ಕಂಪಣಗಳು ಹಾಗೂ ಮೂರು ಪಟ್ಟಣಗಳು ಇದ್ದವೆಂದು ಹೇಳಲಾಗಿದೆ ಆ ಕಾಲದಲ್ಲಿ ಆರಗದಲ್ಲಿದ್ದ ಕಲ್ಲಿನಾಥ ದೇವgಸೇವೆಗೆ ವಿವಿಧ ದತ್ತಿಗಳನ್ನು ನೀಡಿದ್ದಾಗಿ ತಿಳಿಸುತ್ತದೆ. ಈತ ಹಲವಾರು ಧಾರ್ಮಿಕ ಕಾರ್ಯಗಳು ಹಾಗೂ ಆಡಳಿತ ಸುಧಾರಣೆ ಮಾಡಿದ್ದಾಗಿ ತಿಳಿಯುತ್ತದೆ.
ಈ ಶಾಸನದ ಅನ್ವೇಷಣೆ ಮಾಡುವಲ್ಲಿ ತೀರ್ಥಹಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದ ನೆಂಪೆ ದೇವರಾಜು ಪ್ರಮುಖ ಪಾತ್ರ ವಹಿಸಿದ್ದು, ಮೈಸೂರಿನ ಮಾನಸ ಗಂಗೋತ್ರಿಯ ನಿವೃತ್ತ ಶಾಸನ ತಜ್ಞ ಎಚ್.ಎಂ. ನಾಗರಾಜರಾವ್ ಇವರು ಸುದೀರ್ಘ ಕಾಲದ ತಾಳ್ಮೆ ಹಾಗೂ ಪರಿಶ್ರಮದಿಂದ ಶಾಸನ ವನ್ನು ಓದಿ ಪಠ್ಯವನ್ನು ತಯಾರಿಸುವಲಿ ಯಶಸ್ವಿಯಾಗಿದ್ದು ಈ ಶಾಸನದ ಪ್ರಕಟಣೆಯಲ್ಲಿ ಇವರ ನೆರವು ಅತ್ಯಂತ ಮಹತ್ವದ್ದಾಗಿದೆ ಎಂದು ಸಂಶೋಧಕರದ ಮೇಕನಗದ್ದೆ ಲಕ್ಷ್ಮಣಗೌಡ ತಿಳಿಸಿದ್ದಾರೆ.
Home ಸ್ಥಳಿಯ ಸುದ್ದಿ ಮೂಡಿಗೆರೆ : ಹಾರೋಗುಳಿಗೆಯಲ್ಲಿ 15ನೇ ಶತಮಾನಕ್ಕೆ ಸೇರಿದ ವಿಜಯನಗರ ಶಾಸನ ಪತ್ತೆ ಹಚ್ಚಿದ ಮೇಕನಗದ್ದೆ ಲಕ್ಷ್ಮಣಗೌಡ…










