ಮೂಡಿಗೆರೆ: ಹ್ಯಾಂಡ್ ಪೋಸ್ಟ್ ಸರ್ಕಲ್ : ಸಾಹಿತಿ ಪೂರ್ಣಚಂದ್ರ ತೇಜಸ್ವಿ ಹೆಸರಿಡಲು ಒತ್ತಾಯ…

1688
firstsuddi
  • ಮೊದಲಮನೆ ಸುಧೀರ್

ಮೂಡಿಗೆರೆ: ಮೂಡಿಗೆರೆಯ ಹ್ಯಾಂಡ್ ಪೋಸ್ಟ್ ಸರ್ಕಲ್ ಯಾರಿಗೆ ಗೊತ್ತಿಲ್ಲ ಹೇಳಿ. ಚಲನಚಿತ್ರ ನಿರ್ಮಾಣದಿಂದ ಹಿಡಿದು, ವಿವಿಧ ಭಾಗಗಳಿಂದ ಬರುವ ಪ್ರವಾಸಿಗರಿಗೆ ಈ ಜಾಗ ನೆಚ್ಚಿನ ಜಾಗ ಎಂದರೆ ತಪ್ಪಾಗಲಾರದು. ಆದರೆ ಇದೀಗ ಹೆದ್ದಾರಿ ಪ್ರಾಧಿಕಾರ ಮತ್ತು ಸ್ಥಳೀಯ ಆಡಳಿತವು ಇಲ್ಲಿರುವ ಹಳೇ ಸರ್ಕಲ್ ಅನ್ನು ಒಡೆದು ಹೊಸ ಸರ್ಕಲ್ ನಿರ್ಮಾಣಕ್ಕೆ ಮುಂದಾಗಿದ್ದು, ಹೊಸ ಸರ್ಕಲ್ ನಿರ್ಮಾಣದ ನಂತರ ಹ್ಯಾಂಡ್ ಪೋಸ್ಟ್ ಸರ್ಕಲ್ ಬದಲು ಹೆಸರಾಂತ ಸಾಹಿತಿ ದಿ.ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಹೆಸರು ಇಡುವಂತೆ ರಾಜ್ಯದ ಹಲವು ಸಾಹಿತಿಗಳು ಸ್ಭೆರಿದಂತೆ ಇಲ್ಲಿನ ಸ್ಥಳೀಯರ ಒಕ್ಕೋರಳ ಬೇಡಿಕೆಯಾಗಿದೆ.
ಪ್ರಸುತ ಹ್ಯಾಂಡ್ ಪೋಸ್ಟ್ ಸರ್ಕಲ್ ಇದೀಗ ಹೆದ್ದಾರಿ ಪ್ರಾಧಿಕಾರದ ಸುಪರ್ದಿಗೆ ಬಂದಿದ್ದು ಹೆದ್ದಾರಿ ಕಾಮಗಾರಿಯ ಉದ್ದೇಶಕ್ಕಾಗಿ ಹಳೆಯ ಸರ್ಕಲ್ ಅನ್ನು ಒಡೆದು ನೂತನ ಮಾದರಿಯ ದೊಡ್ಡ ವೃತ್ತವನ್ನು ನಿರ್ಮಾಣ ಮಾಡಲಾಗುತ್ತಿದೆ. ಇದರ ನಡುವೆಯೇ ಹಳೆಯ ಹೆಸರಿಗೆ ಬದಲಾಗಿ ನೂತನ ಹೆಸರು ನಾಮಕರಣ ಮಾಡುವಂತೆ ಒತ್ತಾಯ ಕೇಳಿ ಬರುತ್ತಿದೆ.
ತೇಜಸ್ವಿ ಅವರ ಹೆಸರಿಡಲು ಕಾರಣ :ಆಧುನಿಕ ಸಾಹಿತ್ಯದಲ್ಲಿ ಹಳೆಯ ತಲೆಮಾರಿನ ಸಾಹಿತಿಗಳು ಒಂದು ತೂಕವಾದರೆ, ಹೊಸ ಸಂವೇದನಾ ಶೀಲತೆಯ ಪ್ರಜೆಯುಳ್ಳ ಸಾಹಿತಿಗಳು ಮತ್ತೊಂದೆಡೆ ತೂಗುತ್ತಾರೆ. ಇಂತಹ ಅಪರೂಪದ ಹೊಸ ಸಂವೇದನೆಯ ಪೂರ್ಣಚಂದ್ರ ತೇಜಸ್ವಿಯವರು ಸ್ಥಳೀಯರು ಸ್ಭೆರಿದಂತೆ ದೇಶಾದ್ಯಂತ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರು ಮಹಾಕಾವ್ಯ, ಕಾದಂಬರಿ, ನಾಟಕಗಳು, ಲೇಖನಗಳ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡುವುದರ ಜೊತೆಗೆ ಪೂರ್ಣಚಂದ್ರ ತೇಜಸ್ವಿಯಂಥಹ ಹೊಸ ಚಿಂತಕನನ್ನು ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. 1938 ರಲ್ಲಿ ಜನಿಸಿದ ತೇಜಸ್ವಿ ಅವರು ಬಾಲ್ಯದಿಂದಲೇ ಮಲೆನಾಡಿನ ಸುಂದರ ಪರಿಸರದಲ್ಲಿ ಬೆಳೆದವರು. ಕುವೆಂಪು, ಶಿವರಾಮ ಕಾರಂತ, ಲೋಹಿಯಾ, ರಾಮ ಮನೋಹರ ಅವರ ತೀವ್ರ ಪ್ರಭಾವಕ್ಕೆ ಒಳಗಾದ ಇವರು ಸಮಾಜವಾದಿ ಗೋಪಾಲಗೌಡ ಅವರ ಗರಡಿಯಲ್ಲಿ ಪಳಗಿದವರು. ರಾಮದಾಸ್, ಪಿ.ಲಂಕೇಶ್, ಯು.ಆರ್.ಅನಂತಮೂರ್ತಿ ಮುಂತಾದವರ ಸವiಕಾಲೀನರಾಗಿ ಬೆಳೆದು ಬಂದವರು.
“ಸೋಮುವಿನ ಸ್ವಾಗತ ಲಹರಿ” ಎಂಬ ಕಾವ್ಯದ ಮೂಲಕ ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡಿದವರು ತೇಜಸ್ವಿ. ಅಬಚೂರಿನ ಪೋಸ್ಟಾಫೀಸ್, ತಬರನಕಥೆ, ಕಿರಗೂರಿನ ಗಯ್ಯಾಳಿಗಳು, ಅಂಡಮಾನ್ ಮತ್ತು ನಿಕೋಬಾರ್, ಹುಲಿಯೂರಿನ ಸರಹದ್ದು ಕಥಾಸಂಕನಗಳಲ್ಲಿ ಹೊಸತನವನ್ನು ಬಿಂಬಿಸಿದ ಅವರು ‘ಯಮಳ ಪ್ರಶ್ನೆ’ ಎಂಬ ನಾಟಕದಿಂದ ಬದುಕಿನ ಒಗಟನ್ನು ಬಿಡಿಸುವಲ್ಲಿ ಪ್ರಯತ್ನಪಟ್ಟವರು.‘ಸ್ವರೂಪ ಮತ್ತು ನಿಘೂಡ ಮನುಷ್ಯ’ ಕಾದಂಬರಿಗಳಲ್ಲಿ ಹೊಸ ಬದುಕನ್ನು ಬಿಡಿಸಿ ಹೇಳುವ ಅವರ ಪ್ರಯತ್ನ ಅವರ್ಣನೀಯ. ಅದರಲ್ಲೂ ‘ಕರ್ವಾಲೋ ಕಾದಂಬರಿ ಪ್ರಕೃತಿಯ ಸುಂದರತೆಯನ್ನು ಎತ್ತಿಹಿಡಿದು, ಮನುಷ್ಯ ಜೀವನದ ರಹಸ್ಯವನ್ನು ಭೇದಿಸುವಲ್ಲಿ ಅವರಿಗೆ ಅತ್ಯತ್ತಮ ಹೆಸರು ತಂದುಕೊಟ್ಟಿತು.‘ಸುಸ್ಮಿತಾ ಮತ್ತು ಹಕ್ಕಿಮರಿ’ಕಥೆಯ ಮೂಲಕ ಪರಿಸರದ ಜೀವಂತಿಕೆ ಮತ್ತು ‘ಏರೊಪ್ಲೇನ್‍ಚಿಟ್ಟೆ’ ಕೃತಿಗಳ ಮೂಲಕ ಪ್ರಕೃತಿಯ ಅಗಾಧತೆಯನ್ನು ಎಳೆ ಎಳೆಯಾಗಿ ಬಿಚ್ಚಿಡುವ ಹೊಸ ಪ್ರಯತ್ನಕ್ಕೆ ಪೂರ್ಣಚಂದ್ರ ಅವರು ಮಂಚೂಣಿಯಲ್ಲಿದ್ದರು.
ನೂತನ ಹೆಸರಿಡುವ ಬಗ್ಗೆ ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಮುಗ್ರಹಳ್ಳಿ ಸಂತೋಶ್ ಅವರು, ವಿಶ್ವಾದ್ಯಂತ ತಮ್ಮ ಹರಿತವಾದ ಲೇಖನ, ಕಾದಂಬರಿ, ಕಥೆ, ಕವನ ಸಂಕಲನಗಳ ಮೂಲಕ ಹೆಸರು ಮಾಡಿದ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರು ಮೂಡಿಗೆರೆಯ ಹ್ಯಾಂಡ್‍ಪೋಸ್ಟ್‍ನಲ್ಲಿ ತಮ್ಮ ಜೀವಿತಾವಧಿಯನ್ನು ಕಳೆದವರು. ಅವರು ಜನ ಸಾಮಾನ್ಯರೊಡನೆ ಬೆರೆತು ಕಾಲಕಳೆಯುತ್ತಿದ್ದ ದೃಶ್ಯ ಇಲ್ಲಿನ ಸ್ಥಳೀಯರ ಮನಸ್ಸಿನಲ್ಲಿ ಇಂದಿಗೂ ಇದೆ. ಇಂಥಹ ಪ್ರಭುದ್ಧ ಸಾಹಿತಿ ನಮ್ಮ ಜೊತೆಯಲ್ಲಿ ಬಾಳಿದ್ದು ನಮ್ಮೆಲ್ಲರ ಹೆಮ್ಮೆ. ಇಂದು ಅವರು ನಮ್ಮೊಡನೆ ಇಲ್ಲ. ಆದರೆಅವರ ಸಾಹಿತ್ಯ ಸಾಮ್ರಾಜ್ಯ ನಮ್ಮೊಡನೆ ಇದೆ. ಪ್ರಕೃತಿಯಲ್ಲಿನ ಮಾನವ, ಪ್ರಾಣಿಗಳು, ಪಕ್ಷಿ, ಕೀಟಗಳ ಜೊತೆಗೆ ಇರುವ ಅನ್ಯೋನ್ಯ ಸಂಬಂಧದ ಪ್ರಭಂದದ ಮೂಲಕ ತೇಜಸ್ವಿ ಅವರು ಎಲ್ಲರನ್ನು ನಿಬ್ಬೆರಗಾಗಿಸಿದ್ದರು.ಅಲ್ಲದೆ ಅದ್ಭುತ ಜಗತ್ತು ಸರಣಿಯಲ್ಲಿ ಮೂಡಿಬಂದ ವಿಸ್ಮಯ 1, 2 ಮತ್ತು 3 ಕೃತಿಗಳು ಹಾಗೂ ಫ್ಲೈಯಿಂಗ್ ಸಾಸರ್ಸ್ 1 ಮತ್ತು2 ಕೃತಿಗಳು ಕನ್ನಡದ ವಿಜ್ಞಾನ ಲೋಕದಲ್ಲಿ ವಿಶೇಷ ಸ್ಥಾನ ಹೊಂದಿವೆ. ಉಪಯೋಗಕ್ಕೆ ಬಾರದ ಹಳೆಯ ಹೆಸರಿನ ಬದಲಿಗೆ ಸಾಹಿತ್ಯ ಲೋಕಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡು ಕೊಡುಗೆ ಸಲ್ಲಿಸಿದ ಇಂಥಹ ಮಹಾತ್ಮರ ಹೆಸರನ್ನು ರಸ್ತೆಗಳಿಗೆ, ವೃತ್ತಗಳಿಗೆ ಇಡುವ್ಯದರಿಂದ ಅವರಿಗೆ ಗೌರವ ಸಲ್ಲಿಸುವುದರ ಜೊತೆಗೆ ನಮ್ಮ ಊರಿನ ಹೆಸರೂ ಕೂಡ ಔನ್ನತ್ಯಕ್ಕೆ ಬರುತ್ತದೆ ಎಂದರು.
ಈ ರೀತಿಯಾಗಿರಾಜ್ಯದ ವಿವಿಧ ಪ್ರದೇಶಗಳನ್ನು ಮೂಡಿಗೆರೆಗೆ ಬೆಸೆಯುವ ಹ್ಯಾಂಡ್ ಪೋಸ್ಟ್ ಸರ್ಕಲ್ ಇದೀಗ ವಿವಾದಾತ್ಮಕ ಸ್ವರೂಪವನ್ನು ಪಡೆದುಕೊಳ್ಳುತ್ತಿದ್ದು, ನೂತನ ಹೆಸರಿನ ಬೇಡಿಕೆ ಹೆಚ್ಚಾಗಿದೆ ಎಂದು ಹೇಳಬಹುದು. ಸಾಮಾಜಿಕ ಜಾಲತಾಣಗಳಲ್ಲಿಯೂ ಕೂಡ ಹಳೆಯ ಹೆಸರು‘ಹ್ಯಾಂಡ್ ಪೋಸ್ಟ್ ಬದಲಿಗೆ ಸಾಹಿತಿ‘ಕೆ.ಪಿ.ಪೂರ್ಣಚಂದ್ರ ತೇಜಸ್ವಿ’ಅವರ ಮೂರ್ತಿ ಪ್ರತಿಷ್ಠಾಪನೆ ಜೊತೆಗೆ ಅವರ ಹೆಸರನ್ನು ಇಡಬೇಕು ಎನ್ನುವ ಹೋರಾಟ ಹೆಚ್ಚಾಗಿದೆ. ಹಲವು ಚಲನಚಿತ್ರಗಳ ಚಿತ್ರೀಕರಣ ನಡೆದಿರುವ ಈ ಹ್ಯಾಂಡ್ ಪೋಸ್ಟ್ ಸರ್ಕಲ್ ಪೂರ್ಣಚಂದ್ರ ತೇಜಸ್ವಿ ಹೆಸರನ್ನು ಪಡೆದಲ್ಲಿ ಮೂಡಿಗೆರೆಯ ಹೆಸರು ಇನ್ನೂ ಉನ್ನತ ಮಟ್ಟಕ್ಕೆ ತಲುಪಬಲ್ಲುದು ಎಂಬುವುದು ಬಹುತೇಕರ ಅನಿಸಿಕೆಯಾಗಿದೆ.ರಾಜ್ಯದ ವಿವಿಧ ಮೂಲೆಗಳಿಂದ, ವಿದೇಶಕ್ಕೆ ತೆರಳಿರುವ ಇಲ್ಲಿನ ಸ್ಥಳಿಯರು, ಸಾಹಿತ್ಯಾಭಿಮಾನಿಗಳು ಸ್ಭೆರಿದಂತೆ ಇಲ್ಲಿನ ಸಾರ್ವಜನಿಕರು ಸಾಹಿತಿ ಪೂರ್ಣಚಂದ್ರರ ಹೆಸರಿನ ನಾಮಕರಣಕ್ಕೆ ಒಗ್ಗಟ್ಟಿನ ಮಂತ್ರ ಜಪಿಸಿತ್ತಿರುವುದು ಸ್ಥಳೀಯ ಆಡಳಿತಕ್ಕೆ ತಲೆನೋವಾಗಿ ಪರಿಣಮಿಸಿರುವುದಂತೂ ಸತ್ಯ.