ತುಮಕೂರು : ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಡಿ.ಕೆ. ಶಿವಕುಮಾರ್ ಅವರ ಮೇಲೆ ಪ್ರೀತಿ ಇಲ್ಲ. ಒಂದು ವೇಳೆ ಪ್ರೀತಿ ಇದ್ದಿದ್ದರೆ ಒಕ್ಕಲಿಗರ ಸಮುದಾಯದ ಪ್ರತಿಭಟನೆಗೆ ಭಾಗಿಯಾಗುತ್ತಿದ್ದರು ಎಂದು ಮಾಜಿ ಸಚಿವ ಎಸ್.ಆರ್. ಶ್ರೀನಿವಾಸ್ ಅವರು ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಪ್ರತಿಭಟನೆಗೆ ಬರಬೇಕಿತ್ತು ಎಂದೇನೂ ಇಲ್ಲ. ಆದರೆ ನಮಗೆಲ್ಲಾ ಡಿಕೆಶಿ ಮೇಲೆ ಪ್ರೀತಿ ಇದ್ದ ಕಾರಣ ನಮ್ಮ ಸಮುದಾಯದ ಮುಖಂಡನಿಗೆ ಅನ್ಯಾಯ ಆದ ವೇಳೆ ಪ್ರತಿಭಟನೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಆದರೆ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಡಿಕೆಶಿ ಮೇಲೆ ಪ್ರೀತಿ ಮನೋಭಾವನೆ ಇರಲಿಲ್ಲ. ಒಂದು ವೇಳೆ ಮನೋಭಾವನೆ ಇದ್ದಿದ್ದರೆ ಖಂಡಿತ ಪ್ರತಿಭಟನೆಗೆ ಬರುತ್ತಿದ್ದರು. ಅಲ್ಲದೇ ಮೈತ್ರಿ ಸರ್ಕಾರದ ಸಂದರ್ಭದಲ್ಲಿ ಫೋನ್ ಕದ್ದಾಲಿಕೆ ಆಗಿದ್ದು ನಿಜ. ಹೆಚ್.ಡಿ. ಕುಮಾರಸ್ವಾಮಿ ಅವರು ಮಾಡದ್ದನ್ನು ಮಾಡಿ ಹಣವನ್ನು ಪಡೆದುಕೊಂಡಿದ್ದಾರೆ ಅವರನ್ನು ಬಂಧಿಸಲಿ. ಅವರನ್ನೂ ಬಂಧಿಸಬಾರದು ಎಂಬ ಕಾನೂನು ಏನಾದರೂ ಇದೆಯೇ? ನನಗೆ ತಿಳಿದಿರುವಂತೆ ಫೋನ್ ಕದ್ದಾಲಿಕೆ ಆಗಿರುವುದು ನಿಜ. ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೋ ಅವರನ್ನೆಲ್ಲ ಬಂಧಿಸಲಿ. ನಾನು ಸರ್ಕಾರದ ಒಂದು ಭಾಗವಾಗಿದ್ದರೂ ನನ್ನ ಫೋನ್ ಕದ್ದಾಲಿಕೆ ಆಗುತ್ತಿತ್ತು. ವಿಷಯ ತಿಳಿದ ಕೂಡಲೇ ನಾನು ಸಿಮ್ ಬದಲಾಯಿಸಿದೆ. ನನ್ನ ಮೇಲೂ ಅವರಿಗೆ ನಂಬಿಕೆ ಇರಲಿಲ್ಲ ಅನಿಸುತ್ತದೆ ಎಂದರು.










