ಚಿಕ್ಕಮಗಳೂರು : ಸಂಪ್ರದಾಯದ ಹೆಸರಿನಲ್ಲಿ ಸಮಾಜದಲ್ಲಿರುವ ಮೌಢ್ಯಗಳಿಂದ ಮಕ್ಕಳು ಹೊರಬಂದು ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ರವೀಶ್ ಬಸಪ್ಪ ಸಲಹೆ ನೀಡಿದರು.
ನಗರದ ತಾ.ಪಂ. ಸಭಾಂಗಣದಲ್ಲಿ ಇಂದು ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಪ್ರದಾಯದ ಹೆಸರಿನಲ್ಲಿ ಮಕ್ಕಳಲ್ಲಿ ಮೌಢ್ಯಗಳನ್ನು ತುಂಬಿ ಅವರನ್ನು ಬಾವಿಯೊಳಗಿನ ಕಪ್ಪೆಗಳಂತೆ ಮಾಡಲಾಗಿದೆ ಇದರಿಂದಾಗಿ ಸಮಾಜದಲ್ಲಿ ಅನೇಕ ಪಿಡುಗುಗಳು ತಾಂಡವವಾಡುತ್ತಿದೆ ಎಂದು ವಿಷಾದಿಸಿದರು.
ವಿಜ್ಞಾನದಿಂದ ಮಾತ್ರ ದೇಶ ಮುಂದುವರೆಯಲು ವಿಶ್ವದೆದುರು ಬೆಳೆಯಲು ಸಾಧ್ಯ, ಮನುಷ್ಯನ ಬದುಕಿಗೆ ಜ್ಞಾನ ಮತ್ತು ವಿಜ್ಞಾನ ಅತ್ಯಂತ ಅಗತ್ಯ ಅವು ನಮ್ಮ ಬದುಕಿನ ಅವಿಭಾಜ್ಯ ಅಂಗಗಳು ಎಂದ ಅವರು ವಿದ್ಯಾರ್ಥಿಗಳು ಈ ಸತ್ಯವನ್ನು ಅರಿತು ಮೌಢ್ಯಗಳಿಂದ ಹೊರಬರಬೇಕು, ವೈಚಾರಿಕತೆಯನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಶಿಕ್ಷಕಿ ವಸುದಾ ಮಾತನಾಡಿ ವಿಜ್ಞಾನವನ್ನು ಕೇವಲ ವಿಷಯವನ್ನಾಗಿ ಬೋಧಿಸಲಾಗುತ್ತಿದೆ, ಅಂಕಗಳಿಕೆಗಾಗಿ ಮಾತ್ರ ಕಲಿಸಲಾಗುತ್ತಿದೆ ಎಂದು ವಿಷಾದಿಸಿ ಶಿಕ್ಷಕರು ಅದನ್ನು ಬಿಟ್ಟು ವಿದ್ಯಾರ್ಥಿಗಳಲ್ಲಿ ವಿಜ್ಞಾನದ ನೈಜ ಜ್ಞಾನವನ್ನು ಬಿತ್ತಬೇಕು ಎಂದು ಸಲಹೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎಂ.ಮಂಜುನಾಥ ಸ್ವಾಮಿ ವಿದ್ಯಾರ್ಥಿಗಳಲ್ಲಿ ವೈಚಾರಿಕತೆಯನ್ನು ಬೆಳೆಸುವ ನಿಟ್ಟಿನಲ್ಲಿ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಲಾಗಿದೆ ಎಂದು ತಿಳಿಸಿದರು.
ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರವನ್ನು ನೀಡಿ ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಧ್ಯಕ್ಷ ಲೋಕೇಶ್ ಮುಗಳಿಕಟ್ಟೆ ಅಧ್ಯಕ್ಷತೆ ವಹಿಸಿದ್ದರು, ತಾಲ್ಲೂಕು ಅಧ್ಯಕ್ಷ ಕೃಷ್ಣಮೂರ್ತಿ, ಕೊಪ್ಪ ತಾಲ್ಲೂಕು ಅಧ್ಯಕ್ಷ ಓಂಕಾರಪ್ಪ, ಜಿಲ್ಲಾ ಸಂಯೋಜಕ ಚಂದ್ರಪ್ಪ, ಮೂಡಿಗೆರೆ ತಾಲ್ಲೂಕು ಅಧ್ಯಕ್ಷ ಪ್ರಕಾಶ್, ತರೀಕೆರೆ ತಾಲ್ಲುಕು ಅಧ್ಯಕ್ಷ ಶಿವಕುಮಾರ್, ರೈತಸಂಘದ ಮುಖಂಡ ಗುರುಶಾಂತಪ್ಪ, ದಸಂಸ ಮುಖಂಡ ಕೂದುವಳ್ಳಿ ಮಂಜು, ನಟರಾಜ್, ವೀರಭದ್ರಾಚಾರ್, ಶಾಂತಕುಮಾರ್, ಜ್ಯೋತಿ ಉಪಸ್ಥಿತರಿದ್ದರು.










