ಜಾನಪದ ಕಲೆ, ಸಾಹಿತ್ಯ ಉಳಿಸಿ ಬೆಳೆಸುವ ಹೊಣೆಗಾರಿಕೆ ಇಂದಿನ ಪೀಳಿಗೆ ಮೇಲಿದೆ : ರವೀಂದ್ರ ಬೆಳವಾಡಿ.

90
firstsuddi

ಚಿಕ್ಕಮಗಳೂರು : ಆಧುನಿಕತೆಯಿಂದಾಗಿ ಕಣ್ಮರೆಯಾಗುತ್ತಿರುವ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಮಹತ್ತರ ಹೊಣೆಗಾರಿಕೆ ಇಂದಿನ ಪೀಳಿಗೆಯ ಮೇಲಿದೆ ಎಂದು ಜಿ.ಪಂ.ಮಾಜಿ ಸದಸ್ಯ ರವೀಂದ್ರ ಬೆಳವಾಡಿ ಹೇಳಿದರು.

ತಾಲ್ಲೂಕಿನ ಬೆಳವಾಡಿಯ ಶ್ರೀ ಉದ್ಭವ ಗಣಪತಿ ಪ್ರೌಢಶಾಲೆಯ ಆವರಣದಲ್ಲಿ ಶ್ರೀ ಬಸವೇಶ್ವರ ಭಜನಾ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿನ್ನೆ ಏರ್ಪಡಿಸಿದ್ದ ಜಾನಪದ ಕಲೆಗಳ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಾನಪದ ಭಾರತೀಯ ಸಂಸ್ಕೃತಿಯ ಮೂಲಬೇರು, ಅದು ಉಳಿದರೆ ಮಾತ್ರ ನಮ್ಮ ಸಂಸ್ಕೃತಿ ಉಳಿಯುತ್ತದೆ ಜಾನಪದ ನಾಶವಾದರೆ ನಾವು ಪ್ರಪಂಚದೆದುರು ಒಂಟಿಯಾಗಿ ನಿಲ್ಲಬೇಕಾಗುತ್ತದೆ ಎಂದು ಎಚ್ಚರಿಸಿದರು.

ನಗರಸಭೆ ಮಾಜಿ ಅಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ ಮಾತನಾಡಿ ಜನಪದರು ಹೇಳಿಕೊಟ್ಟ ಆಹಾರ ಪದ್ದತಿ ಮತ್ತು ಆರ್ಯುವೇದ ಔಷಧಿಗಳೇ ಕೊರೋನಾ ಸಂದರ್ಭದಲ್ಲಿ ನಮ್ಮನ್ನು ರಕ್ಷಿಸಿದವು ಎಂದು ತಿಳಿಸಿದರು.

ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಮಾತನಾಡಿ ಆಧುನಿಕತೆ ನಮ್ಮ ಜಾನಪದ, ಭವ್ಯ ಪರಂಪರೆ, ಸಂಪ್ರದಾಯ, ಸಂಸ್ಕಾರ ಮತ್ತು ಸಂಸ್ಕೃತಿಯನ್ನು ನಾಶ ಮಾಡುತ್ತಿದ್ದು, ಇಂದಿನ ಪೀಳಿಗೆ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಇದೇ ವೇಳೆ ಗೀತಗಾಯನ ಕಾರ್ಯಕ್ರಮ ಜರುಗಿತು. ಬಸವೇಶ್ವರ ಭಜನಾ ಕಲಾ ಸಂಘದ ಅಧ್ಯಕ್ಷ ಬಿ.ಪಿ.ಪರಮೇಶ್ವರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾ.ಪಂ. ಮಾಜಿ ಅಧ್ಯಕ್ಷ ಬಿ.ಎಸ್.ಬಸವರಾಜು, ಕಿಸಾನ್ ಕಾಂಗ್ರೇಸ್ ಉಪಾಧ್ಯಕ್ಷ ಅಮೀರ್ ಜಾನ್, ಜೆಡಿಎಸ್ ಮುಖಂಡ ತಿಮ್ಮಶೆಟ್ಟಿ, ಮುಖ್ಯಶಿಕ್ಷಕಿ ರೂಪಾ, ಗ್ರಾ.ಪಂ.ಅಧ್ಯಕ್ಷೆ ಭಾಗ್ಯ ಚಂದ್ರಶೇಖರ್, ಕಲಾವಿದ ಪ್ರಕಾಶ್, ಹರ್ಷಿತ, ಶಂಕರೇಗೌಡ ಉಪಸ್ಥಿತರಿದ್ದರು.