ಮೂಡಿಗೆರೆ : ಇಬ್ಬರನ್ನು ಬಲಿ ಪಡೆದಿದ್ದ ಒಂಟಿಸಲಗ, ನರಹಂತಕ ಕಾಡಾನೆ ಮೂಡಿಗೆರೆ ಭೈರನನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಕಳೆದ ನಾಲ್ಕೈದು ತಿಂಗಳಿಂದ ತಾಲೂಕಿನಾದ್ಯಂತ ದಾಂಧಲೆ ನಡೆಸಿಕೊಂಡು ಇಬ್ಬರ ಜೀವ ತೆಗೆದಿದ್ದ ಭೈರನಿಂದ ಜನ ರೋಸಿ ಹೋಗಿ, ಅರಣ್ಯ ಇಲಾಖೆ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದರು. ಅಲ್ಲದೇ ಆನೆ ಹಾವಳಿಯಿಂದ ತಿಂಗಳಿಗೊಂದು ಹೆಣ ಬಿದ್ದ ಪರಿಣಾಮ ತಾಳ್ಮೆಗೆಟ್ಟು ಕಂಗೆಟ್ಟಿದ್ದ ಜನ ಶಾಸಕ ಕುಮಾರಸ್ವಾಮಿ ಮೇಲೂ ಹಲ್ಲೆಗೆ ಮುಂದಾಗಿದ್ದರು. ಜನ ಯಾವಾಗ ಶಾಸಕರ ಮೇಲೆ ಹಲ್ಲೆಗೆ ಮುಂದಾದರೋ ಕೂಡಲೇ ಸರ್ಕಾರ ಮೂರು ಕಾಡಾನೆಗಳನ್ನು ಹಿಡಿಯಲು ಹಸಿರು ನಿಶಾನೆ ತೋರಿತ್ತು.
ಸರ್ಕಾರ ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆ ಕಳೆದ ಎಂಟತ್ತು ದಿನಗಳಿಂದ ಆರು ಸಾಕಾನೆಗಳೊಂದಿಗೆ ಮೂರು ಕಾಡಾನೆಗಳನ್ನು ಹಿಡಿಯಲು ಅಧಿಕಾರಿಗಳು-ಸ್ಥಳೀಯರು ಹಗಲಿರುಳು ಕಷ್ಟ ಪಟ್ಟಿದ್ದರು. ಎರಡು ಕಾಡಾನೆಗಳನ್ನು ಸೆರೆ ಹಿಡಿದು ಮಡಿಕೇರಿಯ ಆನೆ ದುಬಾರೆ ಹಾಗೂ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲು ಆನೆಬಿಡಾರಕ್ಕೆ ಬಿಟ್ಟಿದ್ದರು. ಆದರೆ ಪುಂಡ ಒಂಟಿಸಲಗ ಮೂಡಿಗೆರೆ ಭೈರ ಮಾತ್ರ ಎಲ್ಲರ ಕಣ್ತಪ್ಪಿಸಿ ನಾಪತ್ತೆಯಾಗುತ್ತಿದ್ದ. ಆದರೆ ಭಾನುವಾರ ಮಧ್ಯಾಹ್ನ ತಾಲೂಕಿನ ಊರಬಗೆ ಗ್ರಾಮದಲ್ಲಿ ಭೈರ ಇರುವ ಖಚಿತ ಮಾಹಿತಿ ಪಡೆದ ಅಧಿಕಾರಿಗಳು ನಿರಂತರ ಕಾರ್ಯಾಚರಣೆ ನಡೆಸಿ ನರಹಂತಕನನ್ನು ಖೆಡ್ಡಾಕ್ಕೆ ಬೀಳಿಸಿದ್ದಾರೆ. ನರಹಂತಕನಾಗಿ ಜನರ ನಿದ್ದೆಗೆಡಿಸಿದ್ದ ಮೂಡಿಗೆರೆ ಭೈರ ಸೆರೆಯಾದ ಕಾರಣ ಜನರ ಜೊತೆ ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ನಿಟ್ಟುಸಿರು ಬಿಟ್ಟಿದ್ದಾರೆ.
ಕಳೆದ ಎರಡು ತಿಂಗಳ ಹಿಂದೆಯೂ ಇವನನ್ನು ಹಿಡಿಯೋಕೆ ಎಂದು ದಸರಾ ಆನೆಗಳ ಜೊತೆ ಮಡಿಕೇರಿಯಿಂದ ಒಟ್ಟು ಆರು ಕಾಡಾನೆಗಳು ಬಂದಿದ್ದವು. ಎರಡು ಮೂರು ದಿನ ಕಾರ್ಯಾಚರಣೆ ಕೂಡ ನಡೆಸಿದ್ದವು. ಆದರೆ ಆ ಹೊತ್ತಿಗಾಗಲೇ ಈ ಭೈರ ಕಾಡಿನಲ್ಲಿ ಕಣ್ಮರೆಯಾಗಿದ್ದ. ಈ ವೇಳೆ ಆನೆಗಳಿಗೆ ಜ್ವರ ಹಾಗೂ ಹೊಟ್ಟೆ ಕೆಟ್ಟಿತ್ತು ಎಂದು ಕಾರ್ಯಾಚರಣೆ ಸ್ಥಗಿತಗೊಳಿಸಿ ವಾಪಸ್ ಕಳಿಸಿದ್ದರು. ಇದೀಗ ಎರಡನೇ ಬಾರಿ ಮತ್ತೆ ಬಂದ ಆರು ಸಾಕಾನೆಗಳು ಎಂಟು ದಿನಗಳ ಕಾಲ ನಿರಂತರ ಕಾರ್ಯಾಚರಣೆಯ ಬಳಿಕ ಈ ಭೈರನನ್ನ ಸೆರೆ ಹಿಡಿದಿವೆ.










