ಚಿಕ್ಕಮಗಳೂರು : ಯುವಜನತೆ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳುವ ಮೂಲಕ ಅವುಗಳನ್ನು ಮುಂದಿನ ಪೀಳಿಗೆಗೆ ಉಳಿಸಬೇಕು ಎಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಸಲಹೆ ನೀಡಿದರು.
ಕಡೂರು ತಾಲ್ಲೂಕಿನ ಗಿರಿಯಾಪುರದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ವತಿಯಿಂದ ಆ.21 ರಂದು ನಡೆಯಲಿರುವ ಹಿರೇನಲ್ಲೂರು ಹೋಬಳಿ ಮಟ್ಟದ ಪ್ರಥಮ ಜಾನಪದ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಜಾನಪದ ನಮ್ಮ ಸಂಸ್ಕೃತಿಯ ಮೂಲಬೇರು, ಆಧುನೀಕರಣದ ಭರದಲ್ಲಿ ಅದನ್ನು ನಶಿಸಲು ಬಿಡಬಾರದು, ಜಾನಪದ ನಮ್ಮಿಂದ ದೂರವಾದರೆ ವಿಶ್ವದೆದುರು ನಾವು ನಮ್ಮತನವನ್ನು ಕಳೆದುಕೊಂಡು ಒಂಟಿಯಾಗಿ ನಿಲ್ಲಬೇಕಾಗುತ್ತದೆ ಎಂದು ಎಚ್ಚರಿಸಿದರು.
ಆಧುನಿಕತೆಯ ಅಬ್ಬರದಲ್ಲಿ ಮರೆಯಾಗುತ್ತಿರುವ ಜಾನಪದವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ವತಿಯಿಂದ ತಿಂಗಳಿಗೊಮ್ಮೆ ಜಿಲ್ಲಾದ್ಯಂತ ಜಾನಪದ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ಹೇಳಿದರು. ಸಮ್ಮೇಳನದ ಯಶಸ್ಸಿಗೆ ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.
ಹಿರೇನಲ್ಲೂರು ಹೋಬಳಿ ಅಧ್ಯಕ್ಷ ಜಯಣ್ಣ ಮಾತನಾಡಿ ಸಮ್ಮೇಳನದ ದಿನ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಗ್ರಾಮದಲ್ಲಿ ನಡೆಸಲಾಗುವುದು ಎಂದರು.
ಹಿರೇನಲ್ಲೂರು ಹೋಬಳಿಯ ಎಲ್ಲಾ ಜಾನಪದ ಕಲಾವಿದರಿಗೆ ಸಮ್ಮೇಳನದಲ್ಲಿ ಕಲಾ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಲಾಗುವುದು, ಹಿರಿಯ ಕಲಾವಿದರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಕಡೂರು ಶಾಸಕ ಬೆಳ್ಳಿಪ್ರಕಾಶ್, ಕುವೆಂಪು ವಿವಿ ಕುಲಪತಿ ವೀರಭದ್ರಪ್ಪ, ಅಪರ ಜಿಲ್ಲಾಧಿಕಾರಿ ಬಿ.ಆರ್.ರೂಪ, ಜಾನಪದ ತಜ್ಞ ಡಾ|| ಅಪ್ಪಗೆರೆ ತಿಮ್ಮರಾಜು, ಪತ್ರಕರ್ತ ಹೆಚ್.ಎಸ್.ಪರಮೇಶ್ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ನೌಕಾದಳದ ನಿವೃತ್ತ ಅಧಿಕಾರಿ ಲೆ.ವರದರಾಜು, ಗ್ರಾ.ಪಂ. ಅಧ್ಯಕ್ಷೆ ಚೂಡಾಮಣಿ, ಗುರುಕೃಪಾ ಪ್ರೌಢಶಾಲೆಯ ಅಧ್ಯಕ್ಷ ಜೆ.ಸಿ.ಜಯಸೋಮನಾಥ, ಹಿರಿಯ ವೀರಗಾಸೆ ಕಲಾವಿದ ಡಾ|| ಮಾಳೇನಹಳ್ಳಿ ಬಸಪ್ಪ, ತಿಪ್ಪೇಶ್, ಕಜಾಪ ತಾಲ್ಲೂಕು ಅಧ್ಯಕ್ಷ ಜಗದೀಶ್ವರಾಚಾರ್ ಉಪಸ್ಥಿತರಿದ್ದರು.










