ಚಿಕ್ಕಮಗಳೂರು: ರಾಷ್ಟ್ರಕವಿ ಕುವೆಂಪು ಅವರು ಹೇಳಿರುವಂತೆ ಯುವಜನತೆ ಭತ್ತ ತುಂಬುವ ಚೀಲಗಳಾಗದೆ ಭತ್ತ ಬೆಳೆಯುವ ಗದ್ದೆಗಳಾಗಬೇಕು ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಸಲಹೆ ನೀಡಿದರು.
ಬೆಂಗಳೂರಿನ ಎಂಎಸ್‍ಎಂಇ ಸಂಸ್ಥೆ ಹಾಗೂ ಚಿಕ್ಕಮಗಳೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿರುವ ಎರಡು ದಿನಗಳ ಕಾಲದ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕಾ ಉತ್ಪನ್ನಗಳ ಪ್ರದರ್ಶನ ಹಾಗೂ ವಿಚಾರ ಸಂಕೀರಣ ಕಾರ್ಯಕ್ರಮವನ್ನು ಇಂದು ಉದ್ಘಾಟಿಸಿ ಅವರು ಮಾತನಾಡಿದರು.
ಯುವಜನತೆ ಶಿಕ್ಷಣದ ನಂತರ ಉದ್ಯೋಗಕ್ಕೆ ಜೋತು ಬೀಳಬಾರದು. ಸ್ವಉದ್ಯೋಗ ಮಾಡುವ ಮೂಲಕ ಸ್ವಾವಲಂಬಿಗಳಾಗಬೇಕು. ಉದ್ಯೋಗಿಗಳಾಗುವ ಬದಲು, ಉದ್ದಿಮೆಗಳನ್ನು ಸ್ಥಾಪಿಸಿ ಉದ್ಯೋಗ ನೀಡುವಂತಾಗಬೇಕು ಎಂದು ಕಿವಿ ಮಾತು ಹೇಳಿದರು.
ಸಣ್ಣ, ಅತಿ ಸಣ್ಣ, ಮಧ್ಯಮ ಗಾತ್ರ ಸೇರಿದಂತೆ ಕೈಗಾರಿಕೆಗಳು ಸ್ಥಾಪನೆಗೊಂಡರೆ ದೇಶದ ಅಭಿವೃದ್ಧಿಯಾಗುತ್ತದೆ. ಆ ನಿಟ್ಟಿನಲ್ಲಿ ಕೈಗಾರಿಕಾ ಉತ್ಪನ್ನಗಳ ಪ್ರದರ್ಶನ ಮತ್ತು ವಿಚಾರ ಸಂಕೀರಣ ಏರ್ಪಡಿಸಿರುವುದು ಅತ್ಯಂತ ಪ್ರಸ್ತುತವಾಗಿದೆ ಎಂದರು.
ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಜಿಲ್ಲೆಯಲ್ಲಿ ಮಾಡಬಹುದಾದ ಉದ್ದಿಮೆಗಳ ನೀಲಿನಕ್ಷೆ ತಯಾರಿಸಿದರೆ ಅವುಗಳ ಸ್ಥಾಪನೆಗೆ ಜಿಲ್ಲಾಡಳಿತ ಸಹಕಾರ ನೀಡುತ್ತದೆ ಎಂದ ಅವರು, ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿದರೆ ಜಿಲ್ಲೆಯ ಯುವಜನತೆಗೆ ಉದ್ಯೋಗ ದೊರೆಯುತ್ತದೆ ಜಿಲ್ಲೆಯ ಜೊತೆಗೆ ರಾಜ್ಯದ ಅಭಿವೃದ್ಧಿಯೂ ಆಗುತ್ತದೆ ಎಂದರು.
ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಮುನೀರ್ ಅಹಮದ್ ಮಾತನಾಡಿ, ಕೇಂದ್ರ ಸರ್ಕಾರದ ಮುದ್ರಾ ಯೋಜನೆ ಅಡಿ ಅರ್ಜಿ ಸಲ್ಲಿಸಿದವರಿಗೆ ಮೂರು ದಿನಗಳಲ್ಲಿ 10 ಲಕ್ಷ ರೂ.ಸಾಲ ಒದಗಿಸಬೇಕು. ಆದರೆ, ಬ್ಯಾಂಕುಗಳು ಆ ರೀತಿ ನಡೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸಿದ್ದರಾಜು ಮಾತನಾಡಿ, ಕೇಂದ್ರದ ವತಿಯಿಂದ ಜಿಲ್ಲೆಯಲ್ಲಿ 230 ಎಕರೆ ಜಾಗದಲ್ಲಿ ಕೈಗಾರಿಕಾ ಪ್ರದೇಶ ನಿರ್ಮಾಣ ಮಾಡಿದ್ದು, ಉದ್ಯಮ ಸ್ಥಾಪಿಸುವವರು ಮುಂದೆ ಬಂದಲ್ಲಿ ಅವರಿಗೆ ಅಗತ್ಯವಾದಷ್ಟು ಭೂಮಿಯನ್ನು ನೀಡಲಾಗುವುದು ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯಕ್ರಮ ನಿರ್ದೇಶಕ ಎಸ್.ಎನ್. ವೆಂಕಟೇಶ್ ಜಿಲ್ಲೆಯಲ್ಲಿ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳನ್ನು ಸ್ಥಾಪಿಸಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಚಿಕ್ಕಮಗಳೂರು ವಾಣಿಜ್ಯ ಮತ್ತು ಕೈಗಾರಿಕಾ ಕೇಂದ್ರದ ಅಧ್ಯಕ್ಷ ಆರ್.ಎಂ.ಮಹೇಶ್ ಮಾತನಾಡಿ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಎಂಎಸ್‍ಎಂಇ ನಿರ್ದೇಶಕ ಜಿ.ಆರ್.ಅಕಾದಾಸ್ ಪಿಎಂಎಸ್ ಯೋಜನೆಯ ವಿವರಗಳು ಮತ್ತು ಅದರಡಿ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಈ ವೇಳೆ ನಡೆದ ವಿವಿಧ ಗೋಷ್ಠಿಗಳಲ್ಲಿ ಕೈಗಾರಿಕಾ ಕೇಂದ್ರ ಮತ್ತು ಎಂಎಸ್‍ಎಂಇ ಅಧಿಕಾರಿಗಳು ಪಾಲ್ಗೊಂಡು ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳನ್ನು ಸ್ಥಾಪಿಸುವ ಬಗೆ ಹಾಗೂ ಉದ್ದಿಮೆಗಳನ್ನು ಸ್ಥಾಪಿಸಲು ದೊರೆಯುವ ಸಾಲ, ಸೌಲಭ್ಯ, ಸವಲತ್ತುಗಳ ಕುರಿತು ವಿವರಿಸಿದರು.
ಎಂಎಸ್‍ಎಂಇ ಉಪ ನಿರ್ದೇಶಕರಾದ ಆರ್.ಗೋಪಿನಾಥ್‍ರಾವ್, ಎಂ.ಶಶಿಕುಮಾರ್, ಸಹಾಯಕ ನಿರ್ದೇಶಕ ಬಿಎಸ್ ಹೊಸಮನಿ, ಎಸ್‍ಬಿಐ ವಿಭಾಗೀಯ ವ್ಯವಸ್ಥಾಪಕ ಕನ್ನಯ್ಯ ಲಾಲ್ ಗೋಪಾಲಿ, ಎಐಟಿ ಪ್ರಾಂಶುಪಾಲ ಡಾ.ಸಿ.ಟಿ.ಜಯದೇವ, ಚೇಂಬರ್ ಆಫ್ ಕಾಮರ್ಸ್ ನ ಉಪಾಧ್ಯಕ್ಷ ಶಾಂತಾರಾಮ್ ಹೆಗಡೆ, ಅರುಣಾ ವೆಂಕಟೇಶ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸ್ಥಳದಲ್ಲಿ ನಿರ್ಮಿಸಿರುವ ಮಳಿಗೆಗಳಲ್ಲಿ ನಡೆದ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕಾ ಉತ್ಪನ್ನಗಳ ಪ್ರದರ್ಶನ ಸಾರ್ವಜನಿಕರ ಗಮನ ಸೆಳೆಯಿತು.