ಮೂಡಿಗೆರೆ :ರಂಗರಾಜ್ ಅರಸ್ ವೃತ್ತ ಎಂದು ಮರುನಾಮಕರಣ ಮಾಡುವಂತೆ ಮನವಿ…

147
firstsuddi

ಮೂಡಿಗೆರೆ : ಪಟ್ಟಣದ ಬೇಲೂರು ರಸ್ತೆಯಲ್ಲಿರುವ ಪೋಲಿಸ್ ಸ್ಟೇಷನ್ ಎದುರಿನ ವೃತ್ತಕ್ಕೆ ರಂಗರಾಜ್ ಅರಸ್ ಎಂದು ಮರುನಾಮಕರಣ ಮಾಡುವಂತೆ ಒತ್ತಾಯಿಸಿ ಮೂಡಿಗೆರೆಯ ಅರಸು ಸಂಘದ ವತಿಯಿಂದ ಪಟ್ಟಣ ಪಂಚಾಯತಿ ಅಧ್ಯಕ್ಷ ಬಿ.ಜಿ.ಧರ್ಮಪಾಲ್ ಅವರಿಗೆ ಮನವಿ ಸಲ್ಲಿಸಲಾಯಿತು.

ರಂಗರಾಜ್ ಅರಸ್ ಅವರು ಉಪಾಧ್ಯಾಯರಾಗಿದ್ದು, ಅವರು ತಮ್ಮ ಧರ್ಮಪತ್ನಿ ಕಮಲಮ್ಮ ಅವರ ಹೆಸರಿನಲ್ಲಿ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆಂದು ಈಗಿನ ಪಟ್ಟಣ ಪಂಚಾಯತ್ ಕಛೇರಿ ಪಕ್ಕದಲ್ಲಿ ಶಾಲೆಯನ್ನು ಕಟ್ಟಿಸಿಕೊಟ್ಟಿದ್ದರು. ಈಗಿರುವ ಅಡ್ಯಂತಾಯ ರಂಗಮಂದಿರದ ಜಾಗವನ್ನೂ ಸಹ ಅವರೇ ದೇಣಿಗೆ ನೀಡಿರುತ್ತಾರೆ. ಇದರ ಜೊತೆಗೆ ಚೈತನ್ಯ ಸ್ಟೋರ್ ಹಿಂಭಾಗದಲ್ಲಿರುವ ಬಿ.ಇ.ಓ ಕಛೇರಿ, ಜೂನಿಯರ್ ಕಾಲೇಜು ಸೇರಿದಂತೆ ಸ್ಥಳೀಯ ಮಟ್ಟದ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಅಉಕೂಲವಾಗುವಂಥಹ ಹಲವು ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ.

ಇದಲ್ಲದೆ ಪೋಲಿಸ್ ಸ್ಟೇಷನ್ ಎದುರಿಗಿನ ವೃತ್ತಕ್ಕೆ ಆಗಿನ ಕಾಲದಲ್ಲಿಯೇ ವಿಶಿಷ್ಟವಾದ ಕಲ್ಲುಗಳನ್ನು ಬಳಸಿ ಪುರಾತನ ಶೈಲಿಯಲ್ಲಿ ಕಲ್ಲಿನ ಕಾಂಪೌಂಡ್ ನಿರ್ಮಾಣ ಮಾಡಿ, ವೃತ್ತದ ನಾಲ್ಕು ಮೂಲೆಗಳಲ್ಲಿ ಲಾಂದ್ರದ ದೀಪಗಳನ್ನು ಅಳವಡಿಸಿ ಮೂಡಿಗೆರೆಗೆ ವಿಶೇಷ ಸೊಬಗನ್ನು ನೀಡಿದ್ದರು. ಕಾಲಾಂತರದಲ್ಲಿ ದೊಡ್ಡಪ್ಪ ಗೌಡ ಅವರ ಸಮ್ಮುಖದಲ್ಲಿ ಈ ವೃತ್ತಕ್ಕೆ ತಾಲ್ಲೂಕು ಆಡಳಿತದ ವತಿಯಿಂದ ದಿ.ರಂಗರಾಜ್ ಅರಸ್ ವೃತ್ತ ಎಂದು ನಾಮಕರಣ ಮಾಡಿ ಫಲಕ ನಿಲ್ಲಿಸುವ ಅವರಿಗೆ ಗೌರವ ಸಲ್ಲಿಸಲಾಗಿತ್ತು.

ತದನಂತರದಲ್ಲಿ ರಸ್ತೆ ಅಗಲೀಕರಣ ಸಂದರ್ಭದಲ್ಲಿ ಅಲ್ಲಿರುವ ಫಲಕವನ್ನು ತೆಗೆದುಹಾಕಲಾಗಿದ್ದು, ಅದನ್ನು ಪುನರ್ ಸ್ಥಾಪನೆ ಮಾಡಿ ಆ ವೃತ್ತಕ್ಕೆ ದಿ.ರಂಗರಾಜ್ ಅರಸ್ ಎನ್ನುವ ಹೆಸರಿಡಲಾಗುವುದು ಎಂದು ಭರವಸೆ ನೀಡಲಾಗಿತ್ತು. ಆದರೆ ಇಲ್ಲಿಯವೆರೆಗೂ ಈ ವಿಷಯವಾಗಿ ಯಾವುದೇ ಕಾರ್ಯಗಳು ನಡೆದಿಲ್ಲ. ಈ ವಿಷಯವನ್ನು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡು ನಾಮಫಲಕವನ್ನು ಪುನರ್ ಸ್ಥಾಪಿಸಿ ದಿ.ರಂಗರಾಜ್ ಅರಸ್ ಎಂದು ಪುನರ್ ನಾಮಕರಣ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಪ.ಪಂ.ಅಧ್ಯಕ್ಷೆ ಕಮಲಮ್ಮ, ಪ.ಪಂ.ಸದಸ್ಯ ಸುಧೀರ್, ಪುರುಷೋತ್ತಮ್ ರಾಜ್ ಅರಸ್, ದಶರಥರಾಜ್ ರಾಜ್ ಅರಸ್, ಕುಮಾರ ರಾಜ್ ಅರಸ್, ಅಪೂರ್ವ ಇನ್ಪೋಕಾಂ ಮಾಲೀಕ ಕುಮಾರ್ ರಾಜ್ ಅರಸ್, ಗೋರಕ್ಷಕ ಕ.ದಾ.ಕೃಷ್ಣರಾಜು ಸೇರಿದಂತೆ ಅರಸು ಸಂಘದ ಹಲವು ಪ್ರಮುಖರು ಪಾಲ್ಗೊಂಡಿದ್ದರು.