ಬಾಗಲಕೋಟೆ: ರಂಭಾಪುರಿ ಶ್ರೀಗಳು ಚಲಿಸುತ್ತಿದ್ದ ಕಾರಿಗೆ ಮಹಿಳೆಯೊಬ್ಬರು ಚಪ್ಪಲಿ ತೂರಿದ ಘಟನೆ ಜಿಲ್ಲೆಯ ಕಲಾದಗಿಯಲ್ಲಿ ನಡೆದಿದೆ.
ರಂಭಾಪುರಿ ಶ್ರೀಗಳು ಬಾಗಲಕೋಟೆಯಿಂದ ಕಲಾದಗಿ ಮಾರ್ಗವಾಗಿ ಉದಗಟ್ಟಿ ಗ್ರಾಮಕ್ಕೆ ಅಡ್ಡಪಲ್ಲಕ್ಕಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು. ಈ ವೇಳೆ ಭಕ್ತರು, ರಂಭಾಪುರಿ ಶ್ರೀ ಪ್ರಯಾಣಿಸುತ್ತಿದ್ದ ಕಾರನ್ನು ಅಡ್ಡಹಾಕಿ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೇ ಈ ವೇಳೆ ಮಹಿಳಾ ಭಕ್ತೆಯೊರ್ವರು ಕಾರಿನ ಮೇಲೆ ಚಪ್ಪಲಿ ಎಸೆದಿದ್ದಾಳೆ. ಹೀಗಾಗಿ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದೆ..
ಏನಿದು ಗಲಾಟೆ?
ಕಲಾದಗಿಯ ಗುರುಲಿಂಗೇಶ್ವರ ಪಂಚಗ್ರಹ ಸಂಸ್ಥಾನ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯರಾದ ಬಳಿಕ ಅವರ ಉತ್ತರಾಧಿಕಾರಿಯನ್ನಾಗಿ ರಂಭಾಪುರಿ ಶ್ರೀಗಳು ಮಧ್ಯಸ್ಥಿಕೆ ವಹಿಸಿ ತಮ್ಮದೇ ಪೀಠದ ಶಿಷ್ಯರಾಗಿರುವ ಕೆ.ಎಮ್.ಗಂಗಾಧರ ಸ್ವಾಮೀಜಿಯನ್ನ ನೇಮಕ ಮಾಡಿದ್ದರು.
ಗ್ರಾಮಸ್ಥರ ಸಮ್ಮುಖದಲ್ಲಿ ಉತ್ತರಾಧಿಕಾರಿ ನೇಮಕ ಮಾಡದೇ ಏಕಪಕ್ಷೀಯವಾಗಿ ರಂಭಾಪುರಿ ಶ್ರೀಗಳು ನಿರ್ಧಾರ ತೆಗೆದುಕೊಂಡಿದ್ದಾರೆಂದು ಕೆಲ ಗ್ರಾಮಸ್ಥರು ಆರೋಪಿಸಿದ್ದರು. ನಂತರ ರಂಭಾಪುರಿ ಶ್ರೀಗಳ ವಿರೋಧಿ ಬಣ ನೂತನ ಸ್ವಾಮೀಜಿಯನ್ನಾಗಿ ಮಹಾಂತ ದೇವರು ಸ್ವಾಮೀಜಿಯನ್ನ ಕರೆತಂದು ಅದ್ಧೂರಿ ಮೆರವಣಿಗೆ ಮಾಡಿತ್ತು. ಪರ, ವಿರೋಧ ಬಣಗಳು ಹುಟ್ಟಿಕೊಂಡು ಪ್ರಕರಣ ಈಗ ಜಿಲ್ಲಾ ನ್ಯಾಯಾಲಯದ ಮೆಟ್ಟಿಲೇರಿದೆ.
ಪೀಠಾಧಿಪತಿ ಆಯ್ಕೆ ವಿವಾದ ಕೋರ್ಟ್ ನಲ್ಲಿರುವಾಗ ಗಂಗಾಧರ ಸ್ವಾಮೀಜಿ ಕಟ್ಟಡ ದುರಸ್ತಿ ಹಾಗೂ ಜಮೀನು ಉಳುಮೆ ಮಾಡಿರುವುದು ಈ ತಕರಾರಿಗೆ ಕಾರಣವಾಗಿದೆ.
ಇನ್ನು ಬಾಗಲಕೋಟೆ ಜಿಲ್ಲೆಯ ಕಲಾದಗಿ ಗುರುಲಿಂಗೇಶ್ವರ ಮಠದ ವಿವಾದಕ್ಕೆ ಸಂಬಂಧಿಸಿದಂತೆ ರಂಭಾಪುರಿ ಸ್ವಾಮೀಜಿ ವಿರುದ್ಧ ಕಲಾದಗಿ ಭಕ್ತರು ಆಕ್ರೋಶ ಹೊರಹಾಕಿದ್ದು, ಯಾವುದೇ ಕಾರಣಕ್ಕೂ ಉತ್ತರಾಧಿಕಾರಿ ಗಂಗಾಧರ ಸ್ವಾಮೀಜಿ ಇರಲು ಬಿಡೋದಿಲ್ಲ. ಮಠದ ಆಸ್ತಿ ಹೊಡೆಯಲು ರಂಭಾಪುರಿ ಶ್ರೀಗಳು ಷಡ್ಯಂತ್ರ ನಡೆಸಿದ್ದಾರೆ. ಉತ್ತರಾಧಿಕಾರಿ ನೇಮಕ ವಿಚಾರದಲ್ಲಿ ಕಲಾದಗಿ ಗ್ರಾಮಸ್ಥರನ್ನ ಕೇಳಿಲ್ಲ. ತಮ್ಮ ಸಂಬಂಧಿಯನ್ನೇ ಉತ್ತರಾಧಿಕಾರಿಯನ್ನಾಗಿ ನೇಮಿಸಿದ್ದಾರೆ. ವ್ಯಾಜ್ಯ ಕೋರ್ಟ್ ನಲ್ಲಿದೆ. ಅಲ್ಲಿಯವರೆಗೆ ಉತ್ತರಾಧಿಕಾರಿ ಇರಿಸೋದು ಸರಿಯಲ್ಲ. ನ್ಯಾಯ ಸಿಗೋವರೆಗೆ ಹೋರಾಟ ಮುಂದುವರೆಸುತ್ತೇವೆ. ಈ ಕಾರಣಕ್ಕೆ ರಂಭಾಪುರಿ ಶ್ರೀ ಗ್ರಾಮಕ್ಕೆ ಬಂದಾಗ ವಿರೋಧಿಸಿದ್ದೇವೆ ಎಂದು ಪ್ರತಿಭಟನೆ ನಡೆಸಿದ ಭಕ್ತರು ಮತ್ತು ಮಹಿಳೆಯರು ಹೇಳಿದ್ದಾರೆ.










