ಬೆಂಗಳೂರು : ರಾಜ್ಯದಲ್ಲಿ ಹೇರಲಾಗಿದ್ದ ವೀಕೆಂಡ್ ಕರ್ಫ್ಯೂವನ್ನು ರಾಜ್ಯ ಸರ್ಕಾರ ತೆರವುಗೊಳಿಸಿದೆ. ಇಂದು ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸಚಿವರು, ತಜ್ಞರ ಜೊತೆಗಿನ ಸಭೆಯ ಬಳಿಕ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಸಭೆಯ ಬಳಿಕ ಕಂದಾಯ ಸಚಿವ ಆರ್.ಅಶೋಕ್ ಅವರು ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕರ್ನಾಟಕದಲ್ಲಿ ನಾಳೆಯಿಂದಲೇ ವೀಕೆಂಡ್ ಕರ್ಫ್ಯೂ ರದ್ದಾಗಿದೆ. ತಜ್ಞರ ಅಭಿಪ್ರಾಯದಂತೆ ವೀಕೆಂಡ್ ಕರ್ಫ್ಯೂ ರದ್ದುಪಡಿಸಲಾಗಿದೆ. ಆದರೆ ರಾಜ್ಯದಲ್ಲಿ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 7ರವರೆಗೆ ರಾತ್ರಿ ಕರ್ಫ್ಯೂ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ. ಆಸ್ಪತ್ರೆಗೆ ಸೇರುವವರ ಸಂಖ್ಯೆ ಹೆಚ್ಚಾದರೆ ವೀಕೆಂಡ್ ಕರ್ಫ್ಯೂ ಜಾರಿಮಾಡುವುದು ಅನಿವಾರ್ಯವಾಗುತ್ತದೆ.
ಆಸ್ಪತ್ರೆಗೆ ಸೇರುವವರ ಸಂಖ್ಯೆ ಕಡಿಮೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದರಿಂದ ವೀಕೆಂಡ್ ಕರ್ಫ್ಯೂ ರದ್ದುಪಡಿಸಲಾಗಿದೆ. ಆದರೆ, ಸರ್ಕಾರದ ಉಳಿದೆಲ್ಲ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಬೇಕಿದೆ. ಕೊರೊನಾ 3ನೇ ಅಲೆಯಲ್ಲಿ ಆಸ್ಪತ್ರೆಗೆ ಸೇರುವವರ ಸಂಖ್ಯೆ ಶೇ.5ರಷ್ಟು ಮಾತ್ರ ಇದೆ ಎಂದು ಅಶೋಕ್ ತಿಳಿಸಿದರು.
ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿ ಉಳಿದ ಕಡೆ ಶಾಲೆ ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಬೆಂಗಳೂರಿನಲ್ಲಿ ಸದ್ಯಕ್ಕೆ ಜ.29ರವರೆಗೆ ಶಾಲೆ ಬಂದ್ ಮಾಡಲು ಸರ್ಕಾರ ನಿರ್ಧರಿಸಿದೆ. ಬೆಂಗಳೂರಿನಲ್ಲಿ ಶಾಲೆ ಓಪನ್ ಬಗ್ಗೆ ಜ.29ರಂದು ಮತ್ತೆ ಸಭೆ ನಡೆಸಿ ಶಾಲೆ ಓಪನ್ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಮಕ್ಕಳಿಗೆ ಸೋಂಕು ಹೆಚ್ಚಾದರೆ ಮಾತ್ರ ಶಾಲೆ ಬಂದ್ ಮಾಡಲಾಗುತ್ತದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಮಾಹಿತಿ ನೀಡಿದ್ದಾರೆ.