ರಾಜ್ಯ ಬಜೆಟ್‍ನಲ್ಲಿ ಬೆಳೆಗಾರರ ಸಮಸ್ಯೆಗೆ ಆದ್ಯತೆ ನೀಡಲಿ : ಬಿ.ಆರ್. ಬಾಲಕೃಷ್ಣ.

114
firstsuddi

ಕೊಟ್ಟಿಗೆಹಾರ : ಹಲವಾರು ಸಮಸ್ಯೆಗಳಿಂದ ಬಳಲುತ್ತಿರುವ ಬೆಳೆಗಾರರ ಸಮಸ್ಯೆಗಳಿಗೆ ಈ ಸಲದ ರಾಜ್ಯ ಬಜೆಟ್‍ನಲ್ಲಿ ಆದ್ಯತೆ ನೀಡಲಿ ಎಂದು ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ ಬಾಳೂರು ಹೇಳಿದರು.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸತತವಾಗಿ ಮೂರು ವರ್ಷದಿಂದ ಅತಿವೃಷ್ಟಿಯಿಂದ ಕಾಫಿ, ಅಡಿಕೆ, ಮೆಣಸು, ಭತ್ತ ಮುಂತಾದ ಬೆಳೆಗಳು ಅಪಾರ ಪ್ರಮಾಣದ ಹಾನಿಯಾಗಿದ್ದು ಈ ಬಾರಿ ಕಾಫಿ ಮತ್ತು ಮೆಣಸಿಗೆ ಅಲ್ಪ ಪ್ರಮಾಣದ ಬೆಲೆ ಬಂದರೂ ಕೂಡ ಈ ಬಾರಿ ಅತಿವೃಷ್ಟಿಯಿಂದಾಗಿ ಫಸಲು ಇಲ್ಲದೇ ಇರುವುದರಿಂದ ಬೆಳೆಗಾರರು ಹತಾಶರಾಗಿದ್ದಾರೆ ಎಂದರು.

ಕರ್ನಾಟಕ ಬೆಳೆಗಾರರ ನಿಯೋಗದ ಒಕ್ಕೂಟ ಕೇಂದ್ರ ವಾಣಿಜ್ಯ ಮತ್ತು ಹಣಕಾಸು ಸಚಿವರನ್ನು ಹಲವಾರು ಬಾರಿ ಭೇಟಿ ಮಾಡಿ ಬೆಳೆಗಾರರ ಸಮಸ್ಯೆಗಳನ್ನು ಮನವರಿಕೆ ಮಾಡಿದರೂ ಕೂಡ ಕೇಂದ್ರ ಬಜೆಟ್‍ನಲ್ಲಿ ಬೆಳೆಗಾರರಿಗೆ ಉಪಯುಕ್ತವಾಗುವ ಯಾವ ಅಂಶವೂ ಇಲ್ಲಲದೇ ಇರುವುದು ಬೆಳೆಗಾರರಿಗೆ ನಿರಾಸೆಯಾಗಿದೆ. ಈ ಸಲದ ರಾಜ್ಯ ಬಜೆಟ್ ಸಧ್ಯದಲ್ಲೆ ಇರುವುದರಿಂದ ಈ ಬಜೆಟ್‍ನಲ್ಲಾದರೂ ಬೆಳೆಗಾರರ ಸಮಸ್ಯೆಗೆ ಸ್ಪಂದಿಸುವ ಅಂಶಗಳು ಸೇರಿಸಿ ಬೆಳೆಗಾರರ ಸಮಸ್ಯೆಗೆ ಸರ್ಕಾರ ಸ್ಪಂದಿಸಬೇಕಿದೆ ಎಂದರು.

ಕಾಫಿ ಬೆಳೆಗಾರರಿಗೆ ಒತ್ತುವರಿ ಭೂಮಿಯನ್ನು ಭೋಗ್ಯ (ಲೀಸ್) ನೀಡುವ ಮೂಲಕ ಕೃಷಿ ಮಾಡಲು ಅವಕಾಶ ಮಾಡಿಕೊಡುವುದು. ಪಾರಂ ನಂ 57 ಅರ್ಜಿ ನೀಡಿದವರಿಗೆ ಹಕ್ಕುಪತ್ರವನ್ನು ನೀಡಬೇಕು. ಕಾಡು ಪ್ರಾಣಿಗಳ ಹಾವಳಿ ಕ್ರಮ ಕೈಗೊಳ್ಳುಬೇಕು. ಮೂಡಿಗೆರೆಯಲ್ಲಿ ತೋಟಗಾರಿಕಾ ವಿಶ್ವವಿದ್ಯಾಲಯವನ್ನು ಪ್ರಾರಂಭಿಸಲು ಬೇಕಾದ ಮೂಲ ಸೌಕರ್ಯಗಳು ಮತ್ತು ಸುಮಾರು 600 ಎಕರೆ ಭೂಮಿ, ಜಲಮೂಲಗಳು ಇರುವುದರಿಂದ ಮೂಡಿಗೆರೆಯಲ್ಲಿ ತೋಟಗಾರಿಕಾ ವಿಶ್ವವಿದ್ಯಾಲಯವನ್ನು ಈ ಬಜೆಟ್‍ನಲ್ಲಿ ಘೋಷಣೆ ಮಾಡಬೇಕು. ಈ ಬಗ್ಗೆ ಸರ್ಕಾರದ ಗಮನಕ್ಕೆ ಜನಪ್ರತಿನಿಧಿಗಳು, ಹಲವು ಸಂಘಸಂಸ್ಥೆಗಳು ತಂದಿವೆ. ಮೂಡಿಗೆರೆ ಭಾಗದ ರಸ್ತೆ, ಅತಿವೃಷ್ಟಿಯಿಂದ ಹಾನಿಯಾದ ಕಡೆಗಳಲ್ಲಿ ತಡೆಗೋಡೆ ನಿರ್ಮಾಣಕ್ಕೆ ಬಜೆಟ್‍ನಲ್ಲಿ ಅವಕಾಶ ನೀಡಬೇಕು ಎಂದರು.