ರಾಮನಗರದಲ್ಲಿ ಇಬ್ಬರು ರೈತರನ್ನು ಬಲಿ ಪಡೆದಿದ್ದ ಪುಂಡಾನೆ ಸೆರೆ…

60
firstsuddi

ರಾಮನಗರ : ಜಿಲ್ಲೆಯಲ್ಲಿ ನಾಲ್ಕು ದಿನಗಳ ಅರಣ್ಯ ಇಲಾಖೆಯ ಕಾರ್ಯಾಚರಣೆಯ ನಂತರ ಎರಡು ಜೀವಗಳನ್ನು ಬಲಿ ಪಡೆದಿದ್ದ ಪುಂಡಾನೆಯನ್ನು ನಾಗರಹೊಳೆಯ ಅಭಿಮನ್ಯು ಆನೆಯ ತಂಡದ ಸಹಾಯದಿಂದ ಸೆರೆ ಹಿಡಿಯಲಾಗಿದೆ.

ಕಾರ್ಯಾಚರಣೆಯ ವೇಳೆ ತಪ್ಪಿಸಿಕೊಂಡಿದ್ದ ಸಲಗವನ್ನು ಇದೀಗ ತೆಂಗಿನಕಲ್ಲು ಅರಣ್ಯ ಪ್ರದೇಶದ ಅರಳಾಳುಸಂದ್ರ ಕಾಡನಗುಪ್ಪೆ ಗ್ರಾಮದಲ್ಲಿ ಸೆರೆ ಹಿಡಿಯಲಾಗಿದೆ. ಸಾಕಾನೆಗಳಾದ ಅಭಿಮನ್ಯು, ಅರ್ಜುನ, ಭೀಮ, ಶ್ರೀಕಂಠ, ಮಹೇಂದ್ರ ಸಹಾಯದಿಂದ ಕಾಡಾನೆ ಸೆರೆಗೆ ಕಾರ್ಯಾಚರಣೆ ನಡೆಸಲಾಯಿತು.

ಇಂದು ಬೆಳಗ್ಗೆ ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿ ಕಾಡಾನೆ ಪತ್ತೆಯಾಗಿತ್ತು. ಹೀಗಾಗಿ ಅರವಳಿಕೆ ಮದ್ದು ನೀಡಿ ಸೆರೆ ಹಿಡಿಯಲಾಯಿತು. ಆನಂತರ ಸಾಕಾನೆಗಳ ಸಹಾಯದಿಂದ ಕಾಡಾನೆಯನ್ನು ಕ್ರೇನ್ ಸಹಾಯದಿಂದ ಲಾರಿಗೆ ಹತ್ತಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮುಂದಾಗಿದ್ದು, ಇದರಿಂದ ಕೋಪಗೊಂಡ ಕಾಡಾನೆಯು ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ಟಿತ್ತು. ಅಲ್ಲದೇ ಸಿಟ್ಟಿನಲ್ಲಿ ಕ್ರೇನ್​ಗೆ ಗುದ್ದಿತ್ತು. ಇದರಿಂದ ಆನೆಯ ದಂತವೇ ಮುರಿದು ಬಿದ್ದಿತ್ತು. ಆದರೂ ಸಹ ಸಾಕಾನೆಗಳ ಸಹಾಯದಿಂದ ಕಾಡಾನೆಯನ್ನು ಲಾರಿಗೆ ಹತ್ತಿಸಲಾಯಿತು.

ಆನೆ ದಾಳಿಯಿಂದ ರಾಮನಗರ ಜಿಲ್ಲೆಯ ಇಬ್ಬರು ರೈತರು ಮೃತಪಟ್ಟಿರುವ ಬಗ್ಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಸಂತಾಪ ಸೂಚಿಸಿದ್ದರು. ಜಿಲ್ಲೆಯ ಚನ್ನಪಟ್ಟಣ ತಾಲೂಕು ವಿರೂಪಾಕ್ಷ ಹೋಬಳಿ ವಿರುಪಸಂದ್ರ ಗ್ರಾಮದಲ್ಲಿ ಮಾವಿನ ತೋಟ ಕಾಯುತ್ತಿದ್ದ ವೀರಭದ್ರಯ್ಯ(40) ಮತ್ತು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮಳೆಯೂರು ಅರಣ್ಯ ವಲಯದ ವ್ಯಾಪ್ತಿಯಲ್ಲಿ ರೈತ ರವಿ(40) ಮೃತಪಟ್ಟಿದ್ದರು.

ಮೃತ ರವಿ ಹಾಗೂ ವೀರಭದ್ರಯ್ಯ ಅವರ ಕುಟುಂಬಕ್ಕೆ ನಿಯಾಮಾನುಸಾರ 15 ಲಕ್ಷ ರೂ. ಪರಿಹಾರ ಒದಗಿಸಲಾಗುವುದು ಎಂದು ಈಶ್ವರ ಖಂಡ್ರೆ ತಿಳಿಸಿದ್ದರು.