ರಾಮನಗರ : ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆಗೆ ಯತ್ನ…

47
firstsuddi

ರಾಮನಗರ : ಸಾಲಗಾರರ ಕಾಟಕ್ಕೆ ಬೇಸತ್ತು ಒಂದೇ ಕುಟುಂಬದ ಏಳು ಮಂದಿ ಆತ್ಮಹತ್ಯೆಗೆ ಯತ್ನಿಸಿರುವ ಹೃದಯವಿದ್ರಾವಕ ಘಟನೆ ತಾಲೂಕಿನ ದೊಡ್ಡ ಮಣ್ಣುಗುಡ್ಡೆ ಗ್ರಾಮದಲ್ಲಿ ನಡೆದಿದೆ. ಏಳು ಜನರಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದು, 6 ಮಂದಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಮೂಲತಃ ರಾಮನಗರ ತಾಲೂಕಿನ ಕುಂಬಳಗೂಡು ನಿವಾಸಿ ರಾಜು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಅಲ್ಲದೇ ವಿಪರೀತ ಸಾಲ ಮಾಡಿಕೊಂಡಿದ್ದ. ಸಾಲಗಾರರ ಕಾಟಕ್ಕೆ ಹುಟ್ಟೂರು ತೊರೆದು ಅತ್ತೆ ಮನೆ ದೊಡ್ಡಮಣ್ಣುಗುಡ್ಡೆ ಗ್ರಾಮದಲ್ಲಿ ಕೂಲಿ ಕೆಲಸ ಮಾಡಿಕೊಂಡು ವಾಸವಿದ್ದ. ಹುಟ್ಟೂರು ತೊರೆದರೂ ರಾಜುಗೆ ಸಾಲಗಾರರ ಕಾಟ ಮಾತ್ರ ತಪ್ಪಿರಲಿಲ್ಲ. ಪಡೆದ ಹಣಕ್ಕೆ ಬಡ್ಡಿಯನ್ನು ಕಟ್ಟಲಾಗದ ಬಡ ಕುಟುಂಬ, ಸಾಲ ಪಡೆದವರಿಂದ ನಿರಂತರ ಕಿರುಕುಳಕ್ಕೆ ಒಳಗಾಗಿ ಬೇಸತ್ತಿದ್ದರು. ಕೊನೆಗೆ ಸಾಲಕ್ಕೆ ಹೆದರಿ ಇಡೀ ಕುಟುಂಬದ ಜನರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ನಿನ್ನೆ ಮಧ್ಯಾಹ್ನ ಇಡೀ ಕುಟುಂಬ ಆತ್ಮಹತ್ಯೆಯ ನಿರ್ಧಾರ ಮಾಡಿತ್ತು. ಊರ ಹೊರಗಿದ್ದ ರಾಜು ಮಾವನ ಸಮಾಧಿ ಬಳಿಗೆ ತೆರಳಿದ್ದ ಕುಟುಂಬ, ಊಟ ಹಾಗೂ ತಿಂಡಿಗಳ ಜೊತೆ ಇಲಿ ಪಾಷಾಣ ಸೇವಿದ್ದಾರೆ. ತಲಾ 2 ಪ್ಯಾಕೆಟ್ ಇಲಿ ಪಾಷಾಣ ಸೇವಿಸಿದ್ದ 7 ಮಂದಿ ಸಾವಿಗಾಗಿ ಕಾದು ಸಮಾಧಿ ಬಳಿಯೇ ಕೆಲಕಾಲ ಕುಳಿತಿದ್ದರು. ಕೆಲ ಹೊತ್ತಿನ ಬಳಿಕ ರಾಜು ಪತ್ನಿ ಮಂಗಳಮ್ಮ ತೀವ್ರ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾರೆ. ಉಳಿದವರು ಸಂಕಟ ತಾಳಲಾರದೆ ಊರ ಕಡೆಗೆ ಬಂದು ಗ್ರಾಮದ ಜನರಿಗೆ ವಿಷ ಸೇವಿಸಿರುವುದಾಗಿ ತಿಳಿಸಿದ್ದಾರೆ. ಗ್ರಾಮಸ್ಥರು ತಕ್ಷಣವೇ ಅಸ್ವಸ್ಥರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಬಳಿಕ ಮಂಡ್ಯ ಮೀಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.

ರಾಜು ಪತ್ನಿ ಮಂಗಳಮ್ಮ (28) ಸಾವನ್ನಪ್ಪಿದ್ದರೆ, ರಾಜು(31), ಅತ್ತೆ ಸೊಲ್ಲಾಪುರದಮ್ಮ (48), ಮಕ್ಕಳಾದ ಆಕಾಶ್ (9), ಕೃಷ್ಣ (13), ಹಾಗೂ ಮಂಗಳಮ್ಮ ತಂಗಿ ಸವಿತಾ (24), ಸವಿತಾ ಮಗಳು ದರ್ಶಿನಿ (4) ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.