ಬೆಂಗಳೂರು : ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಮಾಡಾಳ್ ಪ್ರಶಾಂತ್ ಲಂಚ ಸ್ವೀಕಾರ ಪ್ರಕರಣ ಸಂಬಂಧ ಸಮಗ್ರವಾದ ತನಿಖೆ ನಡೆಯುತ್ತಿದೆ. ಈ ವಿಚಾರದಲ್ಲಿ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ತಿಳಿಸಿದರು.
ಬೆಂಗಳೂರಿನ ತಮ್ಮ ಕಾವೇರಿ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೂಕ್ತವಾದ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ. ಪ್ರಕರಣದಲ್ಲಿ ಯಾರೂ ಕೂಡ ಮಧ್ಯಪ್ರವೇಶ ಮಾಡುತ್ತಿಲ್ಲ. ಕಾನೂನು ಚೌಕಟ್ಟಿನಲ್ಲಿ ಯಾವ ಕ್ರಮ ಆಗಬೇಕೋ ಎಲ್ಲವನ್ನೂ ಮಾಡಲಾಗುವುದು ಅಂತ ಸ್ವತಃ ಸಿಎಂ ಹೇಳಿದ್ದಾರೆ. ಅದಾದ ಮೇಲೆ ನಾನೇನು ಮಾತನಾಡಲು ಹೋಗುವುದಿಲ್ಲ ಎಂದರು.
ಲಂಚ ಪ್ರಕರಣ ಖಂಡಿಸಿ ಕಾಂಗ್ರೆಸ್ ನಾಯಕರ ಪ್ರತಿಭಟನೆ ಬಗ್ಗೆ ನಾನೇನು ಉತ್ತರ ನೀಡುವುದಿಲ್ಲ ಎಂದು ಇದೇ ವೇಳೆ ಬಿ.ಎಸ್ ಯಡಿಯೂರಪ್ಪನವರು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ಭ್ರಷ್ಟಾಚಾರ ಆರೋಪದ ಕಾರಣ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿಗಳು ರಾಜೀನಾಮೆ ನೀಡುವಂತೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಇಂದು ಮುಖ್ಯಮಂತ್ರಿಗಳ ನಿವಾಸದ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ.










