ಮಹಾರಾಷ್ಟ್ರದಲ್ಲಿ ಆರು ಕೆಮ್ಮಿನ ಸಿರಪ್ ತಯಾರಕ ಕಂಪನಿಗಳ ಪರವಾನಗಿ ರದ್ದು…

43
firstsuddi

ಮುಂಬೈ : ನಿಯಮ ಉಲ್ಲಂಘಿಸಿದ ಆರು ಕೆಮ್ಮಿನ ಸಿರಪ್ ತಯಾರಕ ಕಂಪನಿಗಳ ಪರವಾನಗಿಯನ್ನು ರದ್ದುಪಡಿಸಲಾಗಿದೆ ಎಂದು ಮಹಾರಾಷ್ಟ್ರ ಸರ್ಕಾರ ಘೋಷಿಸಿದೆ.

ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಆಶಿಕ್ ಶೇಲಾರ್ ಹಾಗೂ ಇತರರ ನೋಟಿಸ್ ಗೆ ಉತ್ತರಿಸಿದ ಆಹಾರ ಮತ್ತು ಔಷಧ ಆಡಳಿತ ಸಚಿವ ಸಂಜಯ್ ರಾಥೋಡ್ ಅವರು, ರಾಜ್ಯದಲ್ಲಿ 108 ಕೆಮ್ಮು ಸಿರಪ್ ತಯಾರಕರ ಪೈಕಿ 84 ತಯಾರಕರ ವಿರುದ್ಧ ಮಹಾರಾಷ್ಟ್ರ ಸರ್ಕಾರ ತನಿಖೆಯನ್ನು ಪ್ರಾರಂಭಿಸಿದೆ. ನಿಯಮಗಳನ್ನು ಉಲ್ಲಂಘಿಸಿದ 17 ಸಂಸ್ಥೆಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಹೇಳಿದ್ದಾರೆ.

ಭಾರತದಿಂದ ಆಮದು ಮಾಡಿಕೊಂಡ ಕೆಮ್ಮು ಸಿರಪ್ ನಿಂದಾಗಿ ಗ್ಯಾಂಬಿಯಾದಲ್ಲಿ 66 ಮಕ್ಕಳು ಮೃತಪಟ್ಟಿದ್ದರು ಎಂದು ಶೇಲಾರ್ ಉಲ್ಲೇಖಿಸಿದ್ದಾರೆ. ಆದರೆ ಆ ಪ್ರಕರಣದಲ್ಲಿ ನಿಯಮಗಳನ್ನು ಉಲ್ಲಂಘಿಸಿದ ಆರೋಪ ಎದುರಿಸುತ್ತಿರುವ ಕಂಪನಿಯು ಹರಿಯಾಣದಲ್ಲಿದ್ದು, ಮಹಾರಾಷ್ಟ್ರದಲ್ಲಿ ಯಾವುದೇ ಉತ್ಪಾದನಾ ಘಟಕವನ್ನು ಹೊಂದಿಲ್ಲ ಎಂದು ಸಚಿವರು ಹೇಳಿದರು.

ಆದರೆ, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದೇವೆ. ಉತ್ಪನ್ನಗಳನ್ನು ರಾಜ್ಯದಿಂದ ರಫ್ತು ಮಾಡುವಾಗ ಜಿಎಂಪಿ ಪ್ರಮಾಣೀಕರಣ ಮತ್ತು ಔಷಧೀಯ ಉತ್ಪನ್ನಗಳ ಪ್ರಮಾಣೀಕರಣದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ನಿಯಮಾವಳಿಗಳನ್ನು ನಾವು ಖಾತ್ರಿಪಡಿಸಿಕೊಳ್ಳುತ್ತಿದ್ದೇವೆ. ರಾಜ್ಯದಲ್ಲಿ 996 ಅಲೋಪತಿ ಔಷಧ ತಯಾರಕರ ಪೈಕಿ 514 ಕಂಪನಿಗಳು ತಮ್ಮ ಉತ್ಪನ್ನಗಳನ್ನು ರಫ್ತು ಮಾಡುತ್ತಿವೆ ಎಂದು ರಾಥೋಡ್ ತಿಳಿಸಿದರು.

ಅಧ್ಯಕ್ಷ ಸಂಜಯ್ ಶಿರ್ಸತ್ ಮಾತನಾಡಿ, ಶೇ.20 ರಷ್ಟು ತಯಾರಕರು ಶಂಕಿತ ನಿಯಮಗಳ ಉಲ್ಲಂಘನೆಯ ಕಾರಣದಿಂದ ದಾಳಿಗಳನ್ನು ಎದುರಿಸಿದರೆ, ಇದು ಜನರ ಜೀವನದ ಜೊತೆ ಚೆಲ್ಲಾಟವಾಡುವುದರಿಂದ ಅದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದರು.