ಲಾಕ್‍ಡೌನ್ ಎಫೆಕ್ಟ್ : ನಿಖಿಲ್-ರೇವತಿ ಮದುವೆ ಸರಳವಾಗಿ ಮನೆಯಲ್ಲೇ ನೆರವೇರಿಸಲು ನಿರ್ಧಾರ…

490
firstsuddi

ಬೆಂಗಳೂರು : ಕೊರೊನಾ ವೈರಸ್ ಭೀತಿಯಿಂದ ಇಡೀ ದೇಶವೇ ಲಾಕ್‍ಡೌನ್ ಆಗಿರುವ ಹಿನ್ನೆಲೆ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಪುತ್ರ, ನಟ ನಿಖಿಲ್ ಕುಮಾರಸ್ವಾಮಿ ಅವರ ಮದುವೆಯನ್ನು ಸರಳವಾಗಿ ಮನೆಯಲ್ಲೇ ನೆರವೇರಿಸುವುದಾಗಿ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ. ನಗರದ ರೇಷ್ಮೆ ಮಾರುಕಟ್ಟೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ನಿಗದಿಯಾದಂತೆ ನಿಖಿಲ್-ರೇವತಿ ವಿವಾಹ ಏಪ್ರಿಲ್ 17ರಂದು ನಮ್ಮ ಮನೆ ಅಥವಾ ರೇವತಿ ಅವರ ಮನೆಯಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಸರಳವಾಗಿ ನೆರವೇರಲಿದೆ ಎಂದು ತಿಳಿಸಿದ್ದಾರೆ.
ನಿಖಿಲ್-ರೇವತಿ ಮದುವೆ ಕಾರ್ಯಕ್ರಮವನ್ನು ಚೆನ್ನಪಟ್ಟಣದ ಜಾನಪದ ಲೋಕದಲ್ಲಿ ಅದ್ದೂರಿಯಾಗಿ ನಡೆಸಲು ನಿರ್ಧರಿಸಿದ್ದರು. ಹಾಗೂ ಅದ್ದೂರಿ ಸೆಟ್ ಹಾಕಲು ಗುದ್ದಲಿ ಪೂಜೆಯನ್ನು ಕೂಡಾ ಮಾಡಲಾಗಿತ್ತು. ಆದರೆ ಕೊರೊನಾ ವೈರಸ್ ಭೀತಿಯಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನೇ ಲಾಕ್‍ಡೌನ್ ಮಾಡಿದ್ದು, ಅಲ್ಲದೇ ಮದುವೆ ಕಾರ್ಯಕ್ರಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಹೀಗಾಗಿ ನಿಖಿಲ್ ಕುಮಾರಸ್ವಾಮಿ ಅವರ ಮದುವೆಯನ್ನು ತಮ್ಮ ಮನೆಯಲ್ಲೇ ಸರಳವಾಗಿ ನೆರವೇರಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ.