ಕಲಬುರಗಿ : ಆಳಂದ ತಾಲೂಕಿನ ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಕಲಬುರಗಿ ಹೈಕೋರ್ಟ್ ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ದರ್ಗಾದಲ್ಲಿರುವ ಶಿವಲಿಂಗಕ್ಕೆ ಇಂದು ಸ್ವಾಮೀಜಿಗಳು, ಹಿಂದೂಪರ ಸಂಘಟನೆ ಮುಖಂಡರು ಹಾಗೂ ಜನಪ್ರತಿನಿಧಿಗಳು ಪೂಜೆ ಸಲ್ಲಿಸಲಿದ್ದು, ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ನಿನ್ನೆ ಮಧ್ಯರಾತ್ರಿ 12 ಗಂಟೆಯಿಂದ ಇಂದು ರಾತ್ರಿ 12ಗಂಟೆ ವರೆಗೂ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಯಶವಂತ್ ಗುರುಕರ್ ಆದೇಶ ಹೊರಡಿಸಿದ್ದಾರೆ.
ಕಳೆದ ವರ್ಷದ ಶಿವರಾತ್ರಿ ಹಬ್ಬದಂದು ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದಲ್ಲಿನ ರಾಘವ ಚೈತನ್ಯ ಶಿವಲಿಂಗದ ಪೂಜೆ ಸಂದರ್ಭದಲ್ಲಿ ಕಲ್ಲು ತೂರಾಟವಾಗಿ ಭಾರೀ ಹಿಂಸಾಚಾರ ನಡೆಸಿತ್ತು. ಇದರಿಂದ ಈ ಬಾರಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ.
ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ರಾಘವ ಚೈತನ್ಯ ಶಿವಲಿಂಗ ಪೂಜೆಗೆ ಅವಕಾಶ ನೀಡಿದ್ದ ವಕ್ಫ್ ಟ್ರಿಬ್ಯುನಲ್ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಲಾಡ್ಲೇ ಮಶಾಕ್ ದರ್ಗಾದಲ್ಲಿ ಶಿವಲಿಂಗ ಪೂಜೆಗೆ ಹದಿನೈದು ಜನರಿಗೆ ಅವಕಾಶ ನೀಡಿ ವಕ್ಫ್ ಟ್ರಿಬುನಲ್ ಕೋರ್ಟ್ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿದ ದರ್ಗಾ ಕಮೀಟಿ, ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿ ಆಲಿಸಿದ ಹೈಕೋರ್ಟ್ ನ್ಯಾಯಮೂರ್ತಿ ಜೆ.ಎಂ.ಖಾಜಿ, ಶಿವಲಿಂಗ ಪೂಜೆಗೆ ಅವಕಾಶ ನೀಡಿ ಆದೇಶ ಹೊರಡಿಸಿದ್ದಾರೆ.
ಈ ಬಾರಿ ಶಿವರಾತ್ರಿಯಂದು ಲಾಡ್ಲೆ ಮಶಾಕ್ ದರ್ಗಾದ ಉರುಸ್ ಮತ್ತು ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಎರಡು ಸಮುದಾಯಗಳಿಗೆ ನ್ಯಾಯಾಲಯ ಅನುಮತಿ ನೀಡಿ ಕೆಲವೊಂದಿಷ್ಟು ಷರತ್ತುಗಳನ್ನು ವಿಧಿಸಿದೆ. ಅದರ ಪ್ರಕಾರ ಇಂದು ಬೆಳಗ್ಗೆ 8 ಗಂಟೆಯಿಂದ 12 ಗಂಟೆಯವರೆಗೆ ಮುಸ್ಲಿಮರು ಉರುಸ್ ಆಚರಣೆಗೆ, ಮಧ್ಯಾಹ್ನ ಎರಡು ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ಹಿಂದೂಗಳಿಗೆ ಶಿವಲಿಂಗ ಪೂಜೆಗೆ ಅವಕಾಶ ನೀಡಿದೆ.










