ಬೆಂಗಳೂರು : ನಗರದಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ತಡೆದು ಪರಿಶೀಲನೆ ನಡೆಸುವಂತಿಲ್ಲ ಎಂದು ಬೆಂಗಳೂರು ನಗರ ಸಂಚಾರ ಪೊಲೀಸರಿಗೆ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಸೂಚನೆ ನೀಡಿದ್ದಾರೆ.
ರಸ್ತೆಯಲ್ಲಿ ಎಲ್ಲೆಂದರಲ್ಲಿ ವಾಹನ ತಡೆದು ಪರಿಶೀಲನೆ ನಡೆಸುವ ಪೊಲೀಸರ ಕ್ರಮದ ವಿರುದ್ಧ ಸಾರ್ವಜನಿಕರು ಟ್ವೀಟ್ ಮೂಲಕ ಪೊಲೀಸ್ ಮಹಾನಿರ್ದೇಶಕರಿಗೆ ದೂರು ದಾಖಲಿಸಿದ್ದರು. ಈ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಪ್ರವೀಣ್ ಸೂದ್ ನಗರದಲ್ಲಿ ವಾಹನಗಳನ್ನು ತಡೆದು ಪರಿಶೀಲನೆ ನಡೆಸುವ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿ ಬಂದಿದೆ. ರಸ್ತೆಯಲ್ಲಿ ಬರುವ ವಾಹನಗಳನ್ನು ಸುಖಾಸುಮ್ಮನೆ ತಡೆದು ವಾಹನಗಳ ಪರಿಶೀಲನೆ ನಡೆಸುವಂತಿಲ್ಲ. ಡ್ರಿಂಕ್ ಆಂಡ್ ಡ್ರೈವ್ ಮಾಡುವ ವಾಹನಗಳಿಗೆ ಮಾತ್ರ ತಪಾಸಣೆ ನಡೆಸಿ. ಕಣ್ಣಿಗೆ ಕಾಣುವಂತೆ ರೂಲ್ಸ್ ಬ್ರೇಕ್ ಮಾಡುವಂತಹ ವಾಹನಗಳನ್ನು ತಡೆದು ಪರಶೀಲಿಸಿ ಎಂದು ನಗರದ ಪೊಲೀಸ್ ಕಮೀಷನರ್ ಹಾಗೂ ಟ್ರಾಫಿಕ್ ಜಂಟಿ ಆಯುಕ್ತರನ್ನು ಟ್ಯಾಗ್ ಮಾಡಿ ಡಿಜಿಪಿ ಟ್ವೀಟ್ ಮಾಡಿದ್ದಾರೆ.










