ನವದೆಹಲಿ : ದೇಶದ ವಿವಿಧೆಡೆ ಸಂಭವಿಸುತ್ತಿರುವ ವಿದ್ಯುತ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಕಲ್ಲಿದ್ದಲು ತುರ್ತು ಸಾಗಣೆಗೆ ಒತ್ತು ನೀಡುತ್ತಿದೆ. ಈ ಪ್ರಯತ್ನದ ಭಾಗವಾಗಿ ಭಾರತೀಯ ರೈಲ್ವೆ ಇನ್ನೂ ಹೆಚ್ಚಿನ ರೈಲುಗಳನ್ನು ರದ್ದುಗೊಳಿಸಿದೆ.
ಕಲ್ಲಿದ್ದಲು ಸಾಗಾಟಕ್ಕೆ ಅನುಕೂಲವಾಗುವಂತೆ ಮೇ 24ರ ವರೆಗೆ ಸುಮಾರು 1,100 ಪ್ಯಾಸೆಂಜರ್ ರೈಲುಗಳು ರದ್ದಾಗಲಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಏಪ್ರಿಲ್ 19ರಂದು ದೇಶಾದ್ಯಂತ ಕಲ್ಲಿದ್ದಲು ಸಾಗಾಟಕ್ಕೆ ಅನುಕೂಲವಾಗುವಂತೆ ಸುಮಾರು 240 ಪ್ಯಾಸೆಂಜರ್ ರೈಲುಗಳನ್ನು ರದ್ದುಗೊಳಿಸುವುದಾಗಿ ರೈಲ್ವೆ ಇಲಾಖೆ ಘೋಷಿಸಿತ್ತು. ಇಲ್ಲಿವರೆಗೆ ಎಕ್ಸ್ ಪ್ರೆಸ್ ರೈಲುಗಳ ಸುಮಾರು 500 ಟ್ರಿಪ್ ಗಳನ್ನು ಹಾಗೂ ಪ್ಯಾಸೆಂಜರ್ ರೈಲುಗಳ 580 ಟ್ರಿಪ್ ಗಳನ್ನು ರದ್ದುಗೊಳಿಸಿಲಾಗಿದೆ.
ಈ ತಿಂಗಳ ಮಧ್ಯದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗಬಹುದು ಎಂದು ಕೆಂದ್ರ ಸರ್ಕಾರ ಅಂದಾಜಿಸಿದೆ. ಹೀಗಾಗಿಯೇ ವಿವಿಧ ಉತ್ಪಾದನಾ ಘಟಕಗಳಿಗೆ ಕಲ್ಲಿದ್ದಲು ಸಾಗಣೆ ಪ್ರಮಾಣ ಹೆಚ್ಚಿಸಲು ಒತ್ತು ನೀಡುತ್ತಿದೆ. ದೇಶದಲ್ಲಿರುವ ಒಟ್ಟು 173 ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳ ಪೈಕಿ 108 ಸ್ಥಾವರಗಳಲ್ಲಿ ಕಲ್ಲಿದ್ದಲು ದಾಸ್ತಾನು ತೀವ್ರವಾಗಿ ಕಡಿಮೆಯಾಗಿದೆ.










