ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಘೋಷಿಸಿದ್ದ 5 ಗ್ಯಾರಂಟಿ ಯೋಜನೆಗಳು ಜಾರಿ: ಸಿಎಂ ಸಿದ್ದರಾಮಯ್ಯ ಘೋಷಣೆ…

53
firstsuddi

ಬೆಂಗಳೂರು: ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಘೋಷಿಸಿದ್ದ ಗ್ಯಾರಂಟಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಘೋಷಣೆ ಮಾಡಿದರು. ಯಾವುದೇ ಜಾತಿ ಧರ್ಮಗಳ ತಾರತಮ್ಯ ಇಲ್ಲದೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲಿದ್ದು, ಈ ಆರ್ಥಿಕ ವರ್ಷದಲ್ಲಿ ಘೋಷಣೆ ಮಾಡಿರುವ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವುದಾಗಿ ಹೇಳಿದರು.

ಸಚಿವ ಸಂಪುಟ ಸಭೆ ಬಳಿಕ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಸಂಪೂರ್ಣ ವಿವರ ಇಲ್ಲಿದೆ.

200 ಯೂನಿಟ್ ವರೆಗೂ ಉಚಿತ ವಿದ್ಯುತ್:
ಗೃಹಜ್ಯೋತಿ ಯೋಜನೆ ಅಡಿ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು. ಯಾರು 200 ಯುನಿಟ್ ಒಳಗಡೆ ವಿದ್ಯುತ್ ಬಳಸುತ್ತಾರೆ ಅವರು ಬಿಲ್ ಕಟ್ಟಬೇಕಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 12 ತಿಂಗಳ ಸರಾಸರಿ ಪಡೆದುಕೊಂಡು ಅದರ ಮೇಲೆ ಶೇ. 10 ರಷ್ಟು ವಿದ್ಯುತ್ ಉಚಿತ, 200 ಯೂನಿಟ್ ವರೆಗೆ ವಿದ್ಯುತ್ ಉಚಿತವಾಗಿದ್ದು, ಈ ಹಿಂದಿನ ಹಳೇ ವಿದ್ಯುತ್ ಬಾಕಿಯನ್ನು ಗ್ರಾಹಕರೇ ಪಾವತಿಸಬೇಕು. ಉಚಿತ ವಿದ್ಯುತ್ ಯೋಜನೆ ಜುಲೈ 1 ರಿಂದ ಜಾರಿಗೆ ಬರಲಿದೆ.

ಗೃಹಲಕ್ಷ್ಮೀ ಯೋಜನೆ ಘೋಷಣೆ:
ಆಗಸ್ಟ್ 15 ರಿಂದ ಗೃಹಲಕ್ಷ್ಮೀ ಯೋಜನೆ ಜಾರಿಯಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದರು. ಯೋಜನೆಗೆ ನೊಂದಾಯಿಸಲು 1 ತಿಂಗಳ ಕಾಲಾವಕಾಶ ಇದ್ದು, ಜೂನ್ 15 ರಿಂದ ಜುಲೈ 15ರೊಳಗೆ ಅರ್ಜಿ ಸಲ್ಲಿಸಬೇಕು. ಆಧಾರ್, ಬ್ಯಾಂಕ್ ಪಾಸ್ ಬುಕ್ ದಾಖಲೆಗಳನ್ನು ಆನ್ ಲೈನ್ ಮೂಲಕ ಸಲ್ಲಿಸಬಹುದು. ಎಪಿಎಲ್, ಬಿಪಿಎಲ್ ವ್ಯತ್ಯಾಸ ಇಲ್ಲದೆ ಮನೆಯ ಯಜಮಾನಿಗೆ ಮಾಸಿಕ ರೂ. 2000 ನೀಡಲಾಗುವುದು. ಪಿಂಚಣಿ ಫಲಾನುಭವಿಗಳಿಗೂ ಈ ಯೋಜನೆ ಅನ್ವಯವಾಗಲಿದೆ ಎಂದರು.

ಅನ್ನಭಾಗ್ಯ ಯೋಜನೆ ಘೋಷಣೆ:
ಜುಲೈ 1 ರಿಂದ ಬಿಪಿಎಲ್ ಮತ್ತು ಅಂತ್ಯೋದಯ ಫಲಾನುಭವಿಗಳಿಗೆ ಮಾಸಿಕ 10 ಕೆಜಿ ಅಕ್ಕಿಯನ್ನು ನೀಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.

ಶಕ್ತಿ ಯೋಜನೆ ಜಾರಿ:
ವಿದ್ಯಾರ್ಥಿನಿಯರು ಸೇರಿದಂತೆ ಸಮಾಜದಲ್ಲಿನ ಎಲ್ಲಾ ಮಹಿಳೆಯರು ಕೆಎಸ್ಆರ್ ಟಿಸಿ ಹಾಗೂ ಬಿಎಂಟಿಸಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಶಕ್ತಿ ಯೋಜನೆಗೆ ಈ ತಿಂಗಳು 11 ನೇ ತಾರೀಖು ಚಾಲನೆ ನೀಡಲಾಗುವುದು. ಬೆಂಗಳೂರಿನಿಂದ ತಿರುಪತಿ, ಬೆಂಗಳೂರಿನಿಂದ ಹೈದರಾಬಾದ್‌ಗೆ ಅವಕಾಶವಿಲ್ಲ. ರಾಜ್ಯದ ಒಳಗೆ ಮತ್ತು ಕರ್ನಾಟಕದವರಿಗೆ ಉಚಿತ ಪ್ರಯಾಣ. ಐಷಾರಾಮಿ, ಎಸಿ ಮತ್ತು ನಾನ್ ಎಸಿ ಸ್ಲೀಪರ್ ಬಸ್‌ಗಳಲ್ಲಿ ಉಚಿತ ಪ್ರಯಾಣವಿಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.

ಯುವನಿಧಿ ಜಾರಿ:
2022-23ರಲ್ಲಿ ಪಾಸ್ ಆದ ಪದವೀಧರ ನಿರುದ್ಯೋಗಿಗಳಿಗೆ ನೋಂದಣಿಯಾದ 24 ತಿಂಗಳವರಗೆ ಪ್ರತಿ ತಿಂಗಳಿಗೆ 3,000 ಮತ್ತು ಡಿಪ್ಲೋಮಾ ಮಾಡಿದವರಿಗೆ 1500 ಗೌರವ ಧನ ನೀಡಲಾಗುವುದು. ಆದರೆ ಇದರ ಒಳಗೆ ಯಾರಾದರೂ ಸರ್ಕಾರಿ ಮತ್ತು ಖಾಸಗಿ ಕಂಪನಿಗಳಿಗೆ ಸೇರಿದರೇ ಅವರಿಗೆ ನೀಡುವುದಿಲ್ಲ. ಇವರು ನಿರುದ್ಯೋಗಿಗಳು ಎಂದು ಘೋಷಿಸಿಕೊಂಡಿರಬೇಕು. ಮತ್ತು ಇದಕ್ಕೆ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಪಪಡಿಸಿದರು.